Mysore
20
overcast clouds
Light
Dark

‘ದಿನಮಾತು’ ಎಂಬ ಪಾಠಶಾಲೆ

  ಹಂಪಿ ವಿಶ್ವವಿದ್ಯಾನಿಲಯದಲ್ಲಿ ನಾವು ಸೇರಿದಾಗ ಪ್ರತಿದಿನ ಬೆಳಿಗ್ಗೆ ಎಲ್ಲರೂ ಸೇರಿ ಯಾವುದಾದರೂ ಒಂದು ವಿಷಯದ ಮೇಲೆ ಚರ್ಚಿಸುವ ಅವಕಾಶ ಕಲ್ಪಿಸಿಕೊಂಡೆವು. ಅದಕ್ಕೆ ‘ದಿನಮಾತು’ ಎಂದು ಕರೆದೆವು. ಕರ್ನಾಟಕದ ಎಲ್ಲ ಭಾಗಗಳಿಂದಲೂ ಬಂದು ಸೇರಿದ ಅಧ್ಯಾಪಕರು-ಸಂಶೋಧನ ವಿದ್ಯಾರ್ಥಿಗಳು, ತಮ್ಮ ತಮ್ಮ ಸೀಮೆಯ ವಿಶಿಷ್ಟ ವಿದ್ಯಮಾನಗಳನ್ನೂ ತಮ್ಮ ಅನುಭವ ಚಿಂತನೆಯನ್ನೂ ಇಲ್ಲಿ ಹಂಚಿಕೊಳುತ್ತಿದ್ದರು. ಉತ್ತರ ಕರ್ನಾಟಕದ ಅಡ್ಡಹೆಸರುಗಳ ಮೇಲೆ ಮಾತನಾಡಿದ ಒಬ್ಬರು, ಅಡಕೆ, ಬೆಲ್ಲದ ಬ್ಯಾಳಿ, ಅಕ್ಕಿ, ಕತ್ತಿ, ಕೋಣನ ಎತ್ತಿನವರ ಕುಂಪಣಿಯವರ- ಹೇಗೆ ವ್ಯಾಪಾರಿ ಸಮುದಾಯದ ಹೆಸರಾಗಿದ್ದವು ಎಂದು ವಿಶ್ಲೇಷಿಸಿದರು. ಇದರಂತೆ ಕರಾವಳಿಯ ತಾಳಮದ್ದಲೆ, ಹೈದರಾಬಾದ್ ಕರ್ನಾಟಕದ ಹರದೇಶಿ ನಾಗೇಶಿ, ಕೊಳ್ಳೇಗಾಲ ಸೀಮೆಯ ಮಂಟೇಸ್ವಾಮಿ ಪರಂಪರೆ, ಮಲೆನಾಡ ಭೂಮಿಹುಣ್ಣಿಮೆ, ಬಯಲುಸೀಮೆಯ ಬಯಲಾಟ ಚರ್ಚೆಗೆ ಬಂದವು. ಇವು ಕರ್ನಾಟಕದ ಸಾಂಸ್ಕ ತಿಕ ವೈವಿಧ್ಯ ಮತ್ತು ಬಹುತ್ವವನ್ನು ಮನವರಿಕೆಗೊಳಿಸಿದವು. ನಾವು ಓದಿದ ಪುಸ್ತಕಗಳ ಮೇಲೂ ಮಾತಾಡಬಹುದಿತ್ತು. ನಾನು ಟಾಲ್‌ಸ್ಟಾಯನ ‘ಅನ್ನಾಕರೆನೀನಾ’ ಮತ್ತು ‘ವಾರ್ ಅಂಡ್ ಪೀಸ್’ ಮೇಲೆ ಮಾತಾಡಿದೆ.

ದಿನಮಾತಿನ ಕಾರ್ಯಕ್ರಮದಿಂದ ನಾಲ್ಕು ಪ್ರಾಥಮಿಕ ಪಾಠಗಳು ಮನವರಿಕೆ ಆದವು. ಅವೆಂದರೆ- ನಮಗೆ ಗೊತ್ತಿಲ್ಲದಿರುವುದು ಎಷ್ಟೊಂದು ಇದೆ; ಅದನ್ನು ಶ್ರದ್ಧೆಯಿಂದ ಕಲಿಯಬೇಕಿದೆ; ಕಲಿಕೆಗೆ ಪುಸ್ತಕ ಓದಿದರೆ ಸಾಲದು, ನಾಡನ್ನು ಸುತ್ತಬೇಕು; ಸಂಶೋಧನೆಯಲ್ಲಿ ಒಂದು ಶಾಸ್ತ್ರದ ತಿಳಿವಳಿಕೆ ಸಾಲದು, ಬಹುಶಿಸ್ತೀಯ ತರಬೇತಿ ಬೇಕು. ದಿನಮಾತಿನಲ್ಲಿ ನಿರ್ದಿಷ್ಟ ವಿಷಯದ ಮೇಲೆ ಹಲವು ಶಿಸ್ತಿನವರು ಒಟ್ಟಿಗೆ ಕೂತು ಚರ್ಚಿಸುವಾಗ, ಅರಿವಿನ ಹೊಸ ಮಗ್ಗುಲು ಮೈದೆರೆಯುತ್ತಿದ್ದವು. ಬಸವಣ್ಣನವರ ಕುರುಳು ಬೆರಳು ಕೊಡುವ ಆಚರಣೆಯ ಉಲ್ಲೇಖವುಳ್ಳ ವಚನದ ಪ್ರಸ್ತಾಪ ಬಂದರೆ, ಬೆರಳುಕೊಡುವ ಭೈರವಾರಾಧನೆಯ ವಿಷಯವೂ ಸೇರಿಕೊಳ್ಳುತ್ತಿತ್ತು; ಪ್ರಾಗೈತಿಹಾಸಿಕ ಸಮಾಧಿಗಳ ಅಗೆತದಲ್ಲಿ ಸಿಕ್ಕ ಬೆರಳಿಲ್ಲದ ಅಸ್ತಿಪಂಜರಗಳ ಉಲ್ಲೇಖವೂ ಸಿಗುತ್ತಿತ್ತು. ಕಡೆಗೆ ಚರ್ಚೆ, ಸಮರ್ಪಣೆಯ ಸಂಕೇತವಾಗಿ ದೇಹದ ಅಂಗವನ್ನು ಊನಗೊಳಿಸುವ ಆಚರಣೆ ಜಗತ್ತಿನಾದ್ಯಂತ ಇರುವ ಇತಿಹಾಸಕ್ಕೆ ಹೊರಳುತ್ತಿತ್ತು.

ಒಂದು ದಿನ, ಪಂಪನ ಎರಡು ಕೃತಿಗಳನ್ನು ಆಗಮ-ಲೌಕಿಕ ಎಂದು ವಿಂಗಡಿಸಿ ನೋಡುವ ಸಮಸ್ಯೆಯ ಬಗ್ಗೆ ಕಿ.ರಂ.ನಾಗರಾಜ ಮಾತಾಡಿದರು. ಇದೇ ಪ್ರಕಾರ, ನಾವು ಜನಪದ-ಶಿಷ್ಟಗಳ ಎದುರಾಳಿತನದ ಗ್ರಹಿಕೆಯನ್ನು ಭಂಜಿಸಿದೆವು. ಚರಿತ್ರೆಯನ್ನು ಬುಡಕಟ್ಟು-ಮಹಿಳಾ-ದಲಿತ ನೆಲೆಯಿಂದ ನೋಡುವುದರಿಂದ ಸಿಗುವ ಹೊಳಹುಗಳ ಬಗ್ಗೆ ಚಿಂತಿಸಿದೆವು; ಚರಿತ್ರೆಯನ್ನು ತಳಸ್ತರದಿಂದ ನೋಡುವುದನ್ನು ಕಲಿಸುವ ಸಬಾಲ್ಟರ್ನ್ ದೃಷ್ಟಿಕೋನದ ಮಹತ್ವ ಮತ್ತು ಮಿತಿ ಗೊತ್ತಾದವು; ಜ್ಞಾನದ ಚಟುವಟಿಕೆಗೆ ಆಯ್ಕೆ ಮಾಡಿಕೊಳ್ಳುವ ಭಾಷೆಯ ಮಾಧ್ಯಮವೇ ದೃಷ್ಟಿಕೋನವನ್ನು ಸಹ ನಿರ್ಧರಿಸುವ ಪರಿ ಮನವರಿಕೆ ಆಯಿತು; ಅನುವಾದದ ಬಗ್ಗೆ ದೊಡ್ಡ ಥಿಯರಿಗಳಲ್ಲಿ ಹೇಳಲಾರದ್ದನ್ನು ಬೇಂದ್ರೆ ಕಾವ್ಯದ ಸಾಲೊಂದು ಹೇಳುವುದು ಅಚ್ಚರಿಗೊಳಿಸಿತು; ಸ್ಥಳೀಯತೆ ಮೂಲಕ ಲೋಕ ಗ್ರಹಿಸುವ ಹಾಗೂ ವಿಶ್ವಾತ್ಮಕ ಚೌಕಟ್ಟುಗಳ ಮೂಲಕ ದೇಶೀ ವಿಶಿಷ್ಟತೆ ಹುಡುಕುವ ಸಾಧ್ಯತೆ ಗೋಚರಿಸಿದವು; ಪಂಪನ ‘ದೇಶಿಯೊಳ್ ಪೊಕ್ಕು ಮಾರ್ಗದೊಳ್ ತಳ್ವುವ’ ಬಿಎಂಶ್ರೀಯವರ ‘ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸುವ’ ಆಶಯಗಳಲ್ಲಿ, ಪರಸ್ಪರ ವಿರುದ್ಧವೆಂದು ತೋರುವ, ಆದರೆ ವಾಸ್ತವದಲ್ಲಿ ವಿರುದ್ಧವಲ್ಲದ ಮುಖಾಮುಖಿಯಿದೆ. ಅಲ್ಲಿ ಅತಿಗೆ ಹೋಗದೆ ವೈರುಧ್ಯಗಳ ಅರ್ಥಪೂರ್ಣ ಕೂಡಿಕೆಯಲ್ಲಿ ಕನ್ನಡವು ಉಪಯುಕ್ತ ತತ್ವಗಳನ್ನು ಹುಡುಕಿಕೊಂಡಿದೆ ಎಂದು ಗೊತ್ತಾಯಿತು. ಒಮ್ಮೆ ಕನ್ನಡದ ಶ್ರೇಷ್ಠ ಕವಿತೆಗಳು ಯಾವುವು ಎಂಬ ಪ್ರಶ್ನೆ ಎದುರಾಯಿತು. ಎಲ್ಲರೂ ಹುಡುಕಿ ಪಟ್ಟಿ ಮಾಡಿದೆವು. ಅವಕ್ಕೆ ವಿಶ್ಲೇಷಣೆ ಬರೆದವು. ‘ನಮ್ಮ ಕನ್ನಡ ಕಾವ್ಯ’ ಪ್ರಕಟವಾಯಿತು. ಅದೊಂದು ಅಪೂರ್ವ ಪ್ರಯೋಗವಾಗಿತ್ತು.

ದಿನಮಾತಿನಲ್ಲಿ ಏಳುತ್ತಿದ್ದ ಸಹಜ ಪ್ರಶ್ನೆಯಲ್ಲಿ, ಕೊಡಲಾಗುತ್ತಿದ್ದ ಸರಳ ಉತ್ತರದಲ್ಲಿ, ಹಠಾತ್ತನೆ ಒಳನೋಟ ಚಿಮ್ಮುತ್ತಿದ್ದವು; ಅವು ಮನಸ್ಸಿನೊಳಗೆ ಇಳಿದು ಕಾಡುತ್ತಿದ್ದವು. ಒಬ್ಬರು ಕೊಟ್ಟ ಒಳನೋಟ ಮತ್ತೊಬ್ಬರಲ್ಲಿ ಮರುಹುಟ್ಟನ್ನೊ ವಿಸ್ತರಣೆಯನ್ನೊ ಪಡೆದು ಲೇಖನವಾಗಿ ರೂಪುಗೊಳ್ಳುತ್ತಿತ್ತು. ಪಾಠ ಮಾಡುವ ಕಾಲೇಜುಗಳಿಂದ ಬಂದ, ಸಂಶೋಧನ ಹಿನ್ನೆಲೆ ಇಲ್ಲದ ನನ್ನಂತಹವರಿಗೆ, ದಿನಮಾತು ಕಲಿವ ಪಾಠಶಾಲೆ ಆಯಿತು. ಅಧ್ಯಯನ ಮಾಡಲು, ವಾದ ಮಂಡಿಸಲು, ತಾತ್ವೀಕರಿಸಲು, ಬರೆಹ ಮಾಡಲು ತರಬೇತಿ ಸಿಕ್ಕಿತು. ಇಲ್ಲಿನ ಚರ್ಚೆಯಲ್ಲಿ ಹೊಮ್ಮುತ್ತಿದ್ದ ಪ್ರಶ್ನೆ-ಉತ್ತರಗಳಿಗೆ, ವಿಶ್ಲೇಷಣೆ-ವ್ಯಾಖ್ಯಾನಗಳಿಗೆ, ಚಿಂತನೆ-ತಾತ್ವೀಕರಣಕ್ಕೆ ಸರಿ ತಪ್ಪು ನಿರ್ಣಯಿಸುವ ಅವಸರವಿರಲಿಲ್ಲ. ಅನಿಸಿದ್ದನ್ನು ಹೇಳುವ, ಭಿನ್ನಮತವನ್ನು ಆಲಿಸುವ ಪ್ರಜಾಪ್ರಭುತ್ವೀಯ ಮುಕ್ತತೆಯಿತ್ತು. ಅಪರೂಪಕ್ಕೆ ಮಾತ್ರ, ವಾಗ್ವಾದದ ತೀವ್ರತೆಯಲ್ಲಿ ಕಿರಂ ಅವರು ಪ್ರತಿಪಕ್ಷದವರ ಮೈಮೇಲೆ ಏರಿಹೋಗುವುದು ಮತ್ತು ಸಭಾತ್ಯಾಗ ಮಾಡುವುದೂ ಜರುಗುತ್ತಿತ್ತು. ಅದು ಯಕ್ಷಗಾನದಲ್ಲಿ ಬೆಳಗಿನ ಜಾವ ಪ್ರೇಕ್ಷಕರೆಲ್ಲ ನಿದ್ದೆಗೆ ಜಾರುವ ಹೊತ್ತಲ್ಲಿ, ಬಣ್ಣದ ವೇಷದವರು ಹೋ ಎಂದು ಆರ್ಭಟಿಸುತ್ತ ಪ್ರವೇಶಿಸಿ, ಬೆಂಕಿಯ ಪಂಜಿಗೆ ರಾಳವನ್ನೆಸೆದು ಧಿಗ್ಗನೆ ಜ್ವಾಲೆ ಹೊಮ್ಮಿಸುವಂತಿತ್ತು.

ದಿನಮಾತಿನಲ್ಲಿ ವಾಗ್ವಾದ ಮಾಡುವಲ್ಲಿ ಸಿಕ್ಕಿ ತರಬೇತಿಯು, ಮುಂದೆ ಅಧಿಕಾರಸ್ಥ ವ್ಯವಸ್ಥೆಯ ಜತೆ ತಾತ್ವಿಕ ಭಿನ್ನಮತ ವ್ಯಕ್ತಪಡಿಸುವ ಮತ್ತು ಸಂಘರ್ಷಿಸುವ, ಇದಕ್ಕಾಗಿ ಬರಬಹುದಾದ ಅಮಾನತ್ತನ್ನು ಎದುರಿಸುವ ಸಾಮೂಹಿಕ ಹಿಮ್ಮತ್ತನ್ನು ಕೊಟ್ಟಿತು. ಸಾಮಾಜಿಕ ವಿದ್ಯಮಾನಗಳ ಬಗ್ಗೆ ಜನಾಭಿಪ್ರಾಯ ರೂಪಿಸಲು ಒಟ್ಟಾಗಿ ಪ್ರತಿಕ್ರಿಯಿಸುವ ಸಂಸ್ಕ ತಿಯನ್ನು ರೂಪಿಸಿತು. ಬಾಬರಿ ಮಸೀದಿ ಕೆಡವಿದಾಗ, ನಾವು ಅಧ್ಯಾಪಕರೆಲ್ಲ ಗ್ರಂಥಾಲಯದ ಮೆಟ್ಟಿಲ ಮೇಲೆ ಕುಲಪತಿಯವರೊಂದಿಗೆ ಮೌನಧರಣಿ ನಡೆಸಿದ್ದು ನೆನಪಾಗುತ್ತಿದೆ. ಮೊದಲ ವರ್ಷಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಸಾಂಸ್ಥಿಕ ಚೌಕಟ್ಟಿನ ಬಿಗಿಯಿಲ್ಲದ ಸೃಜನಶೀಲ ಶಿಥಿಲತೆಯಿತ್ತು. ಇದು ಇರುವೆಯಂತೆ ತೊಡಗಿಕೊಂಡು ಕೆಲಸ ಮಾಡಲು ಹುಮ್ಮಸ್ಸು ಒದಗಿಸಿತು. ವಿಶ್ವವಿದ್ಯಾಲಯ ನಮ್ಮ ಪಾಲಿಗೆ ಚಳವಳಿಯಾಗಿತ್ತು; ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಒರೆಗಲ್ಲಾಗಿತ್ತು; ಅಸ್ಮಿತೆಯಾಗಿತ್ತು; ಕರ್ನಾಟಕದ ವಿವಿಧ ಸಮುದಾಯ ಗಳೊಂದಿಗೆ ಸಂವಾದಿಸುವ ಸೇತುವಾಗಿತ್ತು. ಇದಕ್ಕೆ ದಿನಮಾತು ಅಸ್ತಿವಾರವಾಗಿತ್ತು.

ಆದರೆ ಮೊದಲ ದಿನಗಳ ಕಲಿಕೆಯ ಹುಮ್ಮಸ್ಸು ಲವಲವಿಕೆ ನಂತರ ಕ್ಷೀಣವಾಯಿತು. ದಿನಮಾತನ್ನು ಮತ್ತೆ ಜಾರಿಗೆ ತರುವ ಯತ್ನ ನಡೆದವು. ಮೊದಲಿನ ಜೀವಂತಿಕೆ ಮರಳಲಿಲ್ಲ. ವಿಶ್ವವಿದ್ಯಾಲಯ ಬೆಳೆದು ಹರಡಿ ಎಲ್ಲರೂ ತಂತಮ್ಮ ವಿಭಾಗಗಳಲ್ಲಿ ಬಂಽತರಾದೆವು. ಒಟ್ಟಿಗೆ ಸೇರುವ ಚರ್ಚಿಸುವ ಪರಸ್ಪರ ಶಾಸ್ತ್ರದವರಿಂದ ಪ್ರತಿಕ್ರಿಯೆ ಪಡೆವ ಅವಕಾಶ ಕಡಿಮೆಗೊಂಡಿತು. ತಪ್ಪನ್ನು ವಿರೋಧಿಸುವ ಶಕ್ತಿ ಹ್ರಾಸಗೊಂಡಿತು. ಸಂಸ್ಥೆಯನ್ನೊ ಚಳವಳಿಯನ್ನೊ ಕಟ್ಟುವ ಆರಂಭಿಕ ಹಂತದಲ್ಲಿರುವ ಸ್ವಾತಂತ್ರ್ಯ ಮುಕ್ತತೆ ನಿಷ್ಠುರತೆ ಸೃಜನಶೀಲತೆ ನಮ್ರತೆಗಳು ಕ್ರಮೇಣ ಮಸಳಿಸುತ್ತವೆಯೇ? ಜೀವಂತಿಕೆಯ ವ್ಯಾಖ್ಯೆ ತಲೆಮಾರಿಂದ ತಲೆಮಾರಿಗೆ ಬೇರೆಯಾಗುತ್ತದೆಯೇ? ನಿರ್ದಿಷ್ಟ ಘಟ್ಟವನ್ನು ಇಳಿಕೆ ಎನ್ನುವುದು, ಗತಕಾಲದ ಸುವರ್ಣಯುಗದ ಹಳಹಳಿಕೆಯ ಭಾಗವೇ? ಇಳಿಕೆ ಎನ್ನುವುದು ಸೃಜನಶೀಲತೆ ಹೊಸ ರೂಪಧಾರಣೆ ಮಾಡಿರುವುದನ್ನು ಗುರುತಿಸಲಾಗದ ಪೂರ್ವಗ್ರಹಿಕೆಯೇ? ಈ ಪ್ರಶ್ನೆಗಳೂ ಇವೆ. 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ