Mysore
22
broken clouds

Social Media

ಗುರುವಾರ, 08 ಜನವರಿ 2026
Light
Dark

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಯೋಧ ನಾಪಂಡ ಸಿ. ಮಹೇಶ್ ಅಂತ್ಯಕ್ರಿಯೆ

ಸೋಮವಾರಪೇಟೆ: ಕರ್ತವ್ಯದಲ್ಲಿದ್ದ ಸಂದರ್ಭವೇ ಉತ್ತರಾಖಂಡ್‌ನ ಜೋಷಿಮಟ್‌ನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ತಾಕೇರಿ ಗ್ರಾಮದ ಯೋಧ ನಾಪಂಡ ಸಿ. ಮಹೇಶ್(೪೬) ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.

ಕಿರಗಂದೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ನಂತರ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ಕೊಂಡೊಯ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕುಟುಂಬಸ್ಥರು, ಸುತ್ತಮುತ್ತಲ ಗ್ರಾಮಸ್ಥರು, ಮಾಜೀ ಸೈನಿಕರು, ಹಿತೈಷಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಉತ್ತರಾಖಂಡ್‌ನ ಜೋಷಿಮಟ್‌ನಿಂದ ಆಗಮಿಸಿದ್ದ ಸುಬೇದಾರ್ ವಿ. ಮಣಿ, ಹವಾಲ್ದಾರ್ ಪ್ರಸಾದ್, ನಾಯಕ್ ಟಿ.ಆರ್. ರಾಹುಲ್ ಅವರುಗಳು ರಾಷ್ಟ್ರಧ್ವಜವನ್ನು ಶವಪೆಟ್ಟಿಗೆಯ ಮೇಲಿರಿಸಿ ನಮನ ಸಲ್ಲಿಸಿದರು.

ಕೊಡಗು ಪೊಲೀಸ್ ಇಲಾಖೆಯ ವತಿಯಿಂದ ಡಿವೈಎಸ್‌ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಅವರುಗಳು ಹೂಗುಚ್ಛ ಅರ್ಪಿಸಿ ಗೌರವ ವಂದನೆ ಸಲ್ಲಿಸಿದರು. ಮಡಿಕೇರಿ ಡಿಎಆರ್ ಘಟಕದ ಸಿಬ್ಬಂದಿಗಳು ಆರಕ್ಷಕ ಉಪನಿರೀಕ್ಷಕ ಡಿ. ಬಸವರಾಜ ಅವರ ನೇತೃತ್ವದಲ್ಲಿ ಕುಶಾಲತೋಪು ಸಿಡಿಸಿದರು. ಎಎಸ್‌ಐ ಸಿದ್ದೇಶ್ ಅವರ ನೇತೃತ್ವದಲ್ಲಿ ಪೊಲೀಸರ ತಂಡ ಬ್ಯಾಂಡ್ ಬಾರಿಸಿ ನಮನ ಸಲ್ಲಿಸಿತು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ನರಗುಂದ್ ಸೇರಿದಂತೆ ಕಂದಾಯ ಇಲಾಖಾ ಅಧಿಕಾರಿಗಳು, ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಸೇರಿದಂತೆ ಸದಸ್ಯರುಗಳು, ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರು, ಗ್ರಾಮದ ಹಿರಿಯರು ಅಂತ್ಯಕ್ರಿಯೆ ಸಂದರ್ಭ ಭಾಗಿಯಾಗಿ ನಮನ ಸಲ್ಲಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!