ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಬಳಿಗೆ ನಿತ್ಯವೂ ಒಂಟಿ ಸಲಗ ನೋಡಲು ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವುದು ಅರಣ್ಯ ಇಲಾಖೆಗೆ ಪೀಕಲಾಟ ತಂದೊಡ್ಡಿದೆ.
ಪ್ರತಿನಿತ್ಯ ಒಂಟಿ ಸಲಗ ಸಂಜೆ ವೇಳೆ ದೇವಸ್ಥಾನದ ಬಳಿ ಬಂದು ಭಕ್ತರು ನೀಡುವ ಪ್ರಸಾದ, ಬಾಳೆಹಣ್ಣು, ಕಾಯಿ ಸವಿಯುತ್ತಿದೆ. ಜನರು ಕೂಡ ಯಾವುದೇ ಭಯವಿಲ್ಲದೆ ಆನೆಯ ಸಮೀಪ ತೆರಳಿ ಹಣ್ಣು, ಕಾಯಿ ನೀಡಲು ಮುಂದಾಗುತ್ತಿದ್ದಾರೆ. ಜೊತೆಗೆ ಕಾಡಾನೆ ಜತೆಗೆ ಸೆಲ್ಪಿ, ಫೋಟೊ, ವಿಡಿಯೋ ಮಾಡಲು ಮುಂದಾಗುತ್ತಿದ್ದಾರೆ. ಒಂದುವೇಳೆ ಕಾಡಾನೆ ಏನಾದರೂ ಜನರ ಮೇಲೆ ದಾಳಿ ಮಾಡಿದರೆ ಅರಣ್ಯ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಭಾವಿಸಿರುವ ಅರಣ್ಯ ಇಲಾಖೆ ಆನೆಯ ನಿಯಂತ್ರಣಕ್ಕೆ ಮುಂದಾಗಿದೆ.
ಡೋನ್ ಬಳಸಿದರೆ ಕ್ರಮ: ಬಂಡೀಪುರ ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದು ಇಲಾಖೆಯ ಅನುಮತಿ ಪಡೆಯದೆ ಡೋನ್ ಬಳಸಿ ಆನೆ ಮತ್ತು ದೇವಸ್ಥಾನದ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ಇದ್ದು, ಅವರನ್ನು ಪತ್ತೆಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಫ್ ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.
ಕಾಡಾನೆಯು ದೇವಸ್ಥಾನ ಬಳಿ ಪ್ರತಿನಿತ್ಯ ಬರುತ್ತಿದ್ದು ಇದುವರೆಗೆ ಯಾರಿಗೂ ತೊಂದರೆ ಮಾಡಿಲ್ಲ. ಒಂದುವೇಳೆ ಮದವೇರಿ ಭಕ್ತರ ಮೇಲೆ ಎರಗಿದರೆ ಭಾರೀ ಅನಾಹುತ ಸಂಭವಿಸಬಹುದು. ಹಾಗಾಗಿ ಆನೆಯ ನಿಯಂತ್ರಣಕ್ಕೆ ಒಂದು ತಂಡ ರಚಿಸಲಾಗುವುದು.
-ಡಾ.ರಮೇಶ್ ಕುಮಾರ್, ಸಿಎಫ್, ಬಂಡೀಪುರ ಹುಲಿ ಸಂರಕ್ಷಿತ ವಲಯ.