ಕೊಳ್ಳೇಗಾಲ: ವಿಶೇಷ ಚೇತನರ ಮನೆಗೆ ಕಂದಾಯ ಅಧಿಕಾರಿಗಳೇ ತೆರಳಿ ಆಧಾರ್ ಕಾರ್ಡ್ ಮಾಡಿಕೊಟ್ಟ ಮಾನವೀಯ ಘಟನೆ ತೇರಂಬಳ್ಳಿ ಗ್ರಾಮದಲ್ಲಿ ಜರುಗಿದೆ.
ಕೊಳ್ಳೇಗಾಲ ತಾಲ್ಲೂಕಿನ ತೇರಂಬಳ್ಳಿ ಗ್ರಾಮದ ಮಹದೇವಪ್ಪ ಎಂಬುವವರ ಪುತ್ರ ಚೇತನ್ (೨೪) ವಿಶೇಷ ಚೇತನರಾಗಿದ್ದು ನಡೆದಾಡಲು ಸಾಧ್ಯವಾಗಿದ ಪರಿಸ್ಥಿತಿಯಲ್ಲಿ ಬದುಕು ನೂಕುತ್ತಿದ್ದಾರೆ. ಸರ್ಕಾರದ ನಿರ್ಧಾರದಂತೆ ಮಾಸಾಶನ ತೆಗೆದುಕೊಳ್ಳುವವರೆಲ್ಲರೂ ಆಧಾರ್ ಲಿಂಕ್ ಮಾಡಿಸಬೇಕಾಗಿದ್ದು ಚೇತನ್ ಅವರು ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಇರುವುದರಿಂದ ೩ ತಿಂಗಳ ಮಾಸಾಶನ ನಿಂತುಹೋಗಿತ್ತು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ತಾಲ್ಲೂಕು ಕಛೇರಿಗೆ ಚೇತನ್ ಅವರನ್ನು ಕರೆದುಕೊಂಡು ಬಂದು ಆಧಾರ್ ಲಿಂಕ್ ಮಾಡಿಸಲು ಅವರ ತಂದೆ ಪ್ರಯತ್ನಪಟ್ಟಾಗ ಚೇತನ್ ಅವರು ಸಾರ್ವಜನಿಕರನ್ನು ನೋಡಿ ಗಾಬರಿಯಾಗಿ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಈ ವರೆಗೂ ಮಾಸಾಶನಕ್ಕೆ ಆಧಾರ್ ಲಿಂಕ್ ಮಾಡಿಸಲು ಸಾಧ್ಯವಾಗಿರುವುದಿಲ್ಲ. ಒಮ್ಮೆ ಪಾಳ್ಯ ನಾಡ ಕಛೇರಿ ಹಾಗೂ ತಹಶೀಲ್ದಾರ್ ಕಛೇರಿಗೂ ಬಂದು ಆಧಾರ್ ಲಿಂಕ್ ಮಾಡಿಸಲಾಗದೆ ಸಂಕಷ್ಟ ಅನುಭವಿಸಿದ್ದರು.
ಈ ಸಂಕಷ್ಟವನ್ನು ತಿಳಿದ ತೇರಂಬಳ್ಳಿ ಗ್ರಾಮದ ಲೆಕ್ಕಾಧಿಕಾರಿ ರಾಕೇಶ್ ಮತ್ತು ಗ್ರಾಂ.ಪಂ ಸದಸ್ಯ ರವಿಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ವಿಚಾರ ತಿಳಿಸಿ ಕೊಳ್ಳೇಗಾಲ ತಹಶೀಲ್ದಾರ್ ಮಂಜುಳ ಅವರ ಅನುಮತಿ ಪಡೆದು ಕಂದಾಯ ಅಧಿಕಾರಿಗಳು ಚೇತನ್ ಅವರ ಮನೆಗೆ ಬಂದು ಆಧಾರ್ ಲಿಂಕ್ ಮಾಡಿಕೊಡಿಸಲು ನೆರವಾದರು.
ಜನರನ್ನು ಕಂಡರೆ ಗಾಬರಿಯಾಗುವ ಚೇತನ್ ಅವರ ಪರಿಸ್ಥಿತಿಯ ನಡುವೆ ಜಿಲ್ಲಾ ಆಧಾರ್ ಸಂಯೋಜಕ ಪ್ರಭುಸ್ವಾಮಿ ಅವರ ಸಲಹೆಯಂತೆ ತಾಳ್ಮೆ ವಹಿಸಿ ಡಾಟಾ ಆಪರೇಟರ್ ಸಂಧ್ಯಾ, ಅನುಪಮಾ ಹಾಗೂ ಮಂಜು ಅವರು ಚೇತನ್ ಅವರ ಮಾಸಾಶನಕ್ಕೆ ಆಧಾರ್ ಲಿಂಕ್ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.





