Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಕೊಡಸೋಗೆಯಲ್ಲಿ ಹುಲಿ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಕಾಡಿಗೆ ಓಡಿಸಿರುವುದಾಗಿ ಅರಣ್ಯ ಇಲಾಖೆ ಸ್ಪಷ್ಟನೆ; ಜನರಲ್ಲಿ ಮಾಸದ ಭೀತಿ

ಗುಂಡ್ಲುಪೇಟೆ: ತಾಲ್ಲೂಕಿನ ಕೊಡಸೋಗೆ, ಸೋಮನಪುರ ಸಮೀಪ ಜಮೀನಿನಲ್ಲಿ ಹುಲಿ ಹಾಗೂ ಮರಿ ಬೀಡುಬಿಟ್ಟಿರುವುದನ್ನು ಕಂಡು ಆತಂಕಗೊಂಡಿರುವ ರೈತರು ಕೂಡಲೇ ಹುಲಿ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಕೊಡಸೋಗೆ ಗ್ರಾಮದ ರವಿ ಎಂಬವರು ತಮ್ಮ ಪತ್ನಿ ಹಾಗೂ ಮಗನ ಜತೆಗೂಡಿ ತಮ್ಮ ಜಮೀನಿಗೆ ತೆರಳಿದ್ದಾಗ ಮುಸುಕಿನ ಜೋಳದ ನಡುವೆ ಕಾಡುಹಂದಿಯ ಕಳೇಬರ ಕಣ್ಣಿಗೆ ಬಿದ್ದಿದೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಯಾವುದೋ ಪ್ರಾಣಿ ಅರ್ಧ ದೇಹ ತಿಂದಿರುವುದು ಖಚಿತವಾಗುತ್ತಿದ್ದಂತೆ ಅಲ್ಲಿಯೇ ಇದ್ದ ಹುಲಿ ಜೋರಾಗಿ ಘರ್ಜಿಸಿದೆ. ಕೂಡಲೇ ದಿಕ್ಕಾಪಾಲಾಗಿ ಓಡಿ ಗ್ರಾಮದವರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ರೈತರು ಅಕ್ಕಪಕ್ಕದ ಮರಗಳನ್ನು ಹತ್ತಿ ಜೋಳದ ಹೊಲದಲ್ಲಿ ತಾಯಿ ಹಾಗೂ ಒಂದು ಮರಿ ಹುಲಿ ಇರುವುದನ್ನು ಕಂಡು ಖಚಿತವಾದ ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಮಧ್ಯಾಹ್ನ ಸುಮಾರು ೧ ಗಂಟೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದರು. ಕಳೆದ ಮೂರು ವರ್ಷಗಳಿಂದ ಹುಲಿ ಈ ಪ್ರದೇಶದಲ್ಲಿಯೇ ಸುತ್ತಾಡುತ್ತಾ ಜಾನುವಾರುಗಳನ್ನು ಕೊಲ್ಲುತ್ತಿದ್ದರೂ ಅದರ ಸೆರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಳಿಗ್ಗೆಯೇ ಮಾಹಿತಿ ನೀಡಿದರೂ ಇನ್ನೂ ಸ್ಥಳಕ್ಕೆ ಹುಲಿ ಯೋಜನೆಯ ನಿರ್ದೇಶಕರು ಆಗಮಿಸಿಲ್ಲ. ಕೂಡಲೇ ಹುಲಿ ಸೆರೆಹಿಡಿಯಲು ಕ್ರಮಕೈಗೊಳ್ಳಿ. ಇಲ್ಲದಿದ್ದರೆ ನಾವೇ ಓಡಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್, ಎಸ್‌ಐ ಮಂಜುನಾಥ ನಾಯಕ್ ಉದ್ರಿಕ್ತ ಜನರನ್ನು ನಿಯಂತ್ರಿಸಿ ಜಮೀನಿನಿಂದ ದೂರಕ್ಕೆ ಕಳುಹಿಸಿದರು.

ಗುಂಡ್ಲುಪೇಟೆ ಬಫರ್ ವಲಯದ ಆರ್‌ಎಫ್‌ಒ ಎನ್.ಪಿ.ನವೀನ್ ಕುಮಾರ್ ಮಾತನಾಡಿ, ಈ ಹುಲಿ ಸೆರೆಹಿಡಿಯಲು ಅನುಮತಿ ಕೊಡುವಂತೆ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಿಗೆ ಹತ್ತು ದಿನಗಳ ಹಿಂದೆಯೇ ಪತ್ರ ಬರೆಯಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಸರ್ಕಾರಗಳ ಅನುಮತಿ ದೊರೆತ ಕೂಡಲೇ ಸೆರೆ ಕಾಂರ್ಾಚರಣೆ ಕೈಗೊಳ್ಳಲಾಗುವುದು ಎಂದರು.

 ಜಮೀನಿನಲ್ಲಿರುವ ಹುಲಿ ಸೆರೆ ಹಿಡಿಯಲು ಆಗಲ್ಲ ಎನ್ನುವ ಅರಣ್ಯ ಅಧಿಕಾರಿಗಳು ರೈತರ ಮೇಲೆ ದಾಳಿ ಮಾಡಿ ಕೊಂದು ಹಾಕಿದರೆ ಮತ್ತೆ ಅವರ ಪ್ರಾಣ ತಂದು ಕೊಡಲು ಸಾಧ್ಯವೇ? ಕೂಡಲೆ ಹುಲಿ ಸೆರೆ ಹಿಡಿದು ಕಾಡಿಗೆ ಬಿಡಬೇಕು. -ರಮೇಶ್ ಕೊಡಸೋಗೆ, ಯುವ ಮುಖಂಡ

 ಪಟಾಕಿ ಹೊಡೆದುಕೊಂಡು ಜೀಪ್‌ಗಳ ಮುಲಕ ಸೈರನ್ ಹಾಕಿ ಕಾಡಿಗೆ ಹುಲಿಯನ್ನು ಅಟ್ಟಲಾಗಿದೆ. ಈ ಬಗ್ಗೆ ಖಚಿತತೆಗಾಗಿ ಕೂಂಬಿಂಗ್ ಮಾಡಲಾಗುತ್ತಿದೆ. ಎಲ್ಲಿಯೂ ಹುಲಿ ಕಾಣಿಸಿಕೊಂಡಿಲ್ಲ. -ನವೀನ್ ಕುಮಾರ್, ಆರ್‌ಎಫ್‌ಒ, ಬಫರ್ ಜೋನ್ ವಲಯ, ಗುಂಡ್ಲುಪೇಟೆ

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!