ಮಳೆ, ಮಂಜು, ಚಳಿ: ಅಕ್ಷರಶಃ ಮಡಿಕೇರಿಯಂತಾದ ಮೈಸೂರು
ಮೈಸೂರು :‘ಅಲ್ಲೆಲ್ಲೋ ವಾಯುಭಾರ ಕುಸಿತ, ಇಲ್ಲಿ ಹೀಗೇಕೆ ಮಳೆ ಹನಿಗಳ ಮೊರೆತ?’ ಎಂಬ ಪ್ರಶ್ನೆಯೊಂದಿಗೆ, ಬೆಚ್ಚಗಿರಬೇಕೇನ್ನಿಸುವ ತಣ್ಣನೆಯ ಮಂಕು ಮೈಸೂರಿಗರನ್ನು ಆವರಿಸಿಕೊಂಡಿದೆ.
ಹೌದು…ನಗರದಲ್ಲಿ ಶುಕ್ರವಾರದಿಂದ ಜಿನುಗುತ್ತಿರುವ ಜಿಟಿ ಮಳೆ ಮೈಸೂರನ್ನು ಅಕ್ಷರಶಃ ಮಡಿಕೇರಿಯಂತಾಗಿಸಿದೆ. ಸಧ್ಯ ನಗರ ಮಂಜು ಮತ್ತು ಮಳೆಯ ಸಂಯೋಜಿತವಾಗಿದ್ದು, ಚಳಿ ವಾತಾವರಣವನ್ನು ನಿರ್ಮಾಣ ಮಾಡಿದೆ.

ಇನ್ನು ಶನಿವಾರವೂ ಮುಂಜಾವಿನಿಂದಲೇ ಮುಗಿಲಲ್ಲಿ ಕಾರ್ಮೋಡ ದಟ್ಟೈಸಿತ್ತು. ಆಗಾಗ ತುಂತುರು ಮಳೆಯ ಸಿಂಚನವಾಗುತ್ತಿದೆ. ಹೀಗಾಗಿ ಶಾಲಾ, ಕಾಲೇಜು ಹಾಗೂ ಕಚೇರಿಗೆ ತೆರಳುವವರು ಬೆಚ್ಚನೆಯ ಉಡುಪು ಧರಿಸಿ ರಸ್ತೆಗಿಳಿದಿದ್ದ ದೃಶ್ಯ ಕಂಡುಬಂದವು. ಕೆಲವರು ಮಳೆಯಿಂದ ರಕ್ಷಣೆ ಪಡೆಯಲು ಕೊಡೆಗಳ ಮೊರೆ ಹೋಗಿದ್ದರು. ಮೈ ನಡುಗಿಸುತ್ತಿದ್ದ ಚಳಿಯಿಂದ ತಪ್ಪಿಸಿಕೊಳ್ಳಲು ಕಿವಿಗೆ ಹತ್ತಿ ಹಾಗೂ ಕಿವಿ ಮುಚ್ಚುವ ಟೋಪಿಗಳನ್ನು ಧರಿಸಿ ಓಡಾಡುತ್ತಿದ್ದರು.
ಎರಡು ದಿನಗಳ ನಿರಂತರ ಮಳೆಯಿಂದಾಗಿ ಕೆಲವೆಡೆ ರಸ್ತೆಯಲ್ಲಿ ಮಳೆ ನೀರು ಹರಿಯಿತು. ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ಕೆಲವು ರಸ್ತೆಗಳು ಕೆಸರುಮಯವಾಗಿದ್ದವು. ಹೀಗಾಗಿ ಪಾದಚಾರಿಗಳು ಪರದಾಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ.





