Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಕುರಿ ತಿನ್ನಲು ಬಂದ ಚಿರತೆ ಕೊನೆಗೂ ಬೋನಿಗೆ ಬಿತ್ತು…

ಮದ್ದೂರು: ಹಳೇ ಮೈಸೂರು ಭಾಗದಲ್ಲಿ ಚಿರತೆಗಳ ಉಪಟಳ ಮುಂದುವರಿದಿದೆ. ಮದ್ದೂರು ತಾಲೂಕಿನ ಕುಂದನಕುಪ್ಪೆಯಲ್ಲಿ ಭಾನುವಾರ ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಕುಣಿಗಲ್‌ ತಾಲ್ಲೂಕಿಗೆ ಹೊಂದಿಕೊಂಡಿರುವ ಮದ್ದೂರಿನ ಕೊನೆಯ ಗ್ರಾಮವಾದ ಕುಂದನಕುಪ್ಪೆ ಕೃಷ್ಣೇಗೌಡರ ಕುರಿ ಕೊಟ್ಟಿಗೆಗೆ ರಾತ್ರಿ ವೇಳೆ ಚಿರತೆ ನುಗ್ಗಿತ್ತು. ಬೆಳಿಗ್ಗೆ ಕುರಿ ಕೊಟ್ಟಿಗೆ ಒಳಗೆ ಚಿರತೆಯನ್ನು ಕಂಡ ಕೃಷ್ಣೇಗೌಡರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೊಟ್ಟಿಗೆಯಲ್ಲಿ ಅವಿತು ಕುಳಿತಿರುವ ಚಿರತೆಯನ್ನು ಹಿಡಿಯಲು ಹೊರಗಡೆ ಬೋನು ಇಟ್ಟು ಕಾರ್ಯಾಚರಣೆ ಆರಂಭಿಸಿದ್ದರು.

ಸುಮಾರು ಐದು ಗಂಟೆಗಳ ಕಾರ್ಯಾಚರಣೆ ನಂತರವೂ ಬೋನಿಗೆ ಬೀಳದಿದ್ದಾಗ ತಜ್ಞರನ್ನು ಕರೆಸಿ ಅರಿವಳಿಕೆ ಇಂಜೆಕ್ಷನ್‌ ಪ್ರಯೋಗಿಸಿ ಚಿರತೆಯನ್ನು ಸೆರೆ ಹಿಡಿಯಲಾಯಿತು. ಚಿರತೆ ಹಾವಳಿಯಿಂದ ಬೇಸತ್ತಿದ್ದ ಜನತೆ ಈಗ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಈ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿದ್ದು ಐದಾರು ತಿಂಗಳ ಹಿಂದೆ ಮೂರು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಹೊಸದಾಗಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ರೈತರು ಹಗಲು ವೇಳೆ ಕೂಡ ಒಬ್ಬೊಬ್ಬರೇ ತಮ್ಮ ಹೊಲಗದ್ದೆಗಳಿಗೆ ಹೋಗಲು ಹೆದರಿಕೊಳ್ಳುವಂತಾಗಿತ್ತು. ಶಾಲಾ ಮಕ್ಕಳು, ವೃದ್ಧರು ಮಹಿಳೆಯರು ಗ್ರಾಮದ ಹೊರಕ್ಕೆ ಹೋಗಲೂ ಭಯಪಡುತ್ತಿದ್ದರು. ಚಿರತೆಯನ್ನು ಹಿಡಿದು ಈ ಭಾಗದ ಜನರ ಭೀತಿ ದೂರ ಮಾಡಿರುವ ಅರಣ್ಯ ಇಲಾಖೆಗೆ ಗ್ರಾಮದ ಮುಖಂಡ ಕುಂದನ್ ಕುಪ್ಪೆ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!