ಅಂತರಸಂತೆ: ತಾಯಿ ಹುಲಿಯ ಸಾವಿನ ನಂತರ ಗಂಡು ಹುಲಿಮರಿಯೊಂದು ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮತ್ತೊಂದು ಹುಲಿ ದಾಳಿಯಿಂದ ಕುತ್ತಿಗೆ, ಭುಜದ ಬಳಿ ತೀವ್ರವಾದ ಗಾಯ ಹಾಗೂ ಮುಂಗಾಲಿನ ಮೂಳೆ ಮುರಿದು ಹುಲಿಯು ಸಾವನ್ನಪ್ಪಿರುವ ಘಟನೆ ನಾಗರಹೊಳೆಯ ಅಂತರಸಂತೆ ವನ್ಯಜೀವಿ ವಲಯದ ತಾರಕ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ನಾಗರಹೊಳೆಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯದ ತಾರಕ ಗಸ್ತಿನ ಬಳಿಕ ಮೂರು ಮರಿಗಳನ್ನು ಹೊಂದಿದ್ದ ತಾಯಿ ಹುಲಿಯೊಂದು ಉರುಳುಗೆ ಸಿಲುಕಿ ಸಾವನ್ನಪ್ಪಿತ್ತು.
ಈ ವೇಳೆ ಅನಾಥವಾಗಿದ್ದ ಮೂರು ಮರಿಗಳನ್ನು ರಕ್ಷಣೆಗೆ ಅರಣ್ಯ ಇಲಾಖೆ ಕೊಂಬಿಂಗ್ ಕಾರಯಾಚರಣೆಯನ್ನು ಆರಂಭಿಸಿತ್ತು. ಈ ಸಂದರ್ಭದಲ್ಲಿ ಹುಲಿ ಮರಿಗಳು ಸ್ವತಃ ತಾವೇ ಜಿಂಕೆಯೊಂದನ್ನು ಬೇಟೆಯಾಡಿ ತಿನ್ನುತ್ತಿದ್ದ ದೃಶ್ಯ ಟ್ರಾಪ್ ಕ್ಯಾಮೆರಾಗೆ ಸೆರೆಯಾಗಿದ್ದರಿಂದ ಮರಿಗಳನ್ನು ಕಾಡಿನಲ್ಲೆ ಬಿಡುವ ನಿರ್ಧಾರಕ್ಕೆ ಅರಣ್ಯ ಇಲಾಖೆ ಬಂದಿತ್ತು. ಅರಣ್ಯ ಇಲಾಖೆಯೂ ಕೊಂಬಿಂಗ್ ಮೂಲಕ ಅವುಗಳ ಚಲನವಲನದ ಮೇಲೆ ನಿಗಾ ವಹಿಸಿತ್ತು.
ಆದರೆ ಇದೀಗ ಕೂಂಬಿಂಗ್ ವೇಳೆ ಹುಲಿಮರಿಯೊಂದರ ಶವ ಪತ್ತೆಯಾಗಿದ್ದು, ಮತ್ತೊಂದು ಹುಲಿಯೊಡನೆ ಕಾದಾಡಿದ ಮರಿ ಹುಲಿಯು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ನಿಗಾವಹಿಸಲು ಕೂಂಬಿಂಗ್ ಮುಂದುವರಿಸುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಮರಣೋತ್ತರ ಪರೀಕ್ಷೆಯ ನಂತರ ಹುಲಿಯ ಕಳೇಬರವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಂಗಸ್ವಾಮಿ, ಪಶುವೈದ್ಯರಾದ ಡಾ.ಎಚ್.ರಮೇಶ್, ಡಾ.ಬಿ.ಬಿ.ಪ್ರಸನ್ನ, ಗೌರವ ವನ್ಯಜೀವಿ ಪರಿಪಾಲಕರು ಮತ್ತು ಎನ್‌ಟಿಸಿಎ ಪ್ರತಿನಿದಿಗಳಾದಕ್ಷಿ ಕೃತಿಕ ಆಲನಹಳ್ಳಿ, ಜೀವನ್ ಕೃಷ್ಣಪ್ಪ. ಅಂತರಸಂತೆ ಗ್ರಾಪಂ ಅಧ್ಯಕ್ಷ ಎಂ.ಸುಬ್ರಮಣ್ಯ, ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ಧರಾಜು ಮುಂತಾದವರು ಹಾಜರಿದ್ದರು.