ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ವಿಜಯದಶಮಿಯಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಟೆಂಟ್ ಪೆಗ್ಗಿಂಗ್ ಪ್ರದರ್ಶನ ನೀಡಿದ ತಂಡಕ್ಕೆ ಮಂಗಳವಾರ ಸಂಜೆ ಕೆಎಆರ್ಪಿ ಅಶ್ವಾರೋಹಿ ದಳದ ಕಚೇರಿಯ ಸಭಾಂಗಣದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತಾ ಅವರು ಒಂದು ಲಕ್ಷ ರೂ. ಬಹುಮಾನ ನೀಡಿದರು.
ಬಳಿಕ ಮಾತನಾಡಿದ ಅವರು, ಪೊಲೀಸ್ ಸಮೂಹ ವಾದ್ಯಮೇಳದ ಕಾರ್ಯಕ್ರಮವನ್ನು ಮೆಚ್ಚಿ ೩ ಲಕ್ಷ ರೂ. ನಗದು ಬಹುಮಾನ ನೀಡಲಾಯಿತು. ಟೆಂಟ್ ಪೆಗ್ಗಿಂಗ್ ತಂಡವೂ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪ್ರೋತ್ಸಾಹಿಸುವ ದೃಷ್ಟಿಯಿಂದ 1 ಲಕ್ಷ ರೂ. ಬಹುಮಾನ ನೀಡಲಾಗಿದೆ. ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಇನ್ನು ಅತ್ಯುತ್ತಮ ಪ್ರದರ್ಶನ ನೀಡಬೇಕು. ಹಳಬರು ಹೊಸದಾಗಿ ಬಂದಿರುವವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಮುಂದಿನ ವರ್ಷದ ಹೊತ್ತಿಗೆ ಅವರನ್ನು ಅಣಿಗೊಳಿಸಬೇಕು ಎಂದು ಸಲಹೆ ನೀಡಿದರು.
ತಂಡದ ೩ ಮಂದಿ ಎಆರ್ಎಸ್ಐ, ೫ ಮಂದಿ ಎಎಚ್ಸಿ ಮತ್ತು ಒಬ್ಬರು ಎಸಿಪಿಗೆ ಬಹುಮಾನ ನೀಡಲಾಯಿತು. ತಂಡದ ಎಆರ್ಎಸ್ಐಗಳಾದ ಎಂ.ಎಸ್.ಆನಂದ ಸಿಂಗ್, ಮಲ್ಲಿಕಾರ್ಜುನ ಸ್ವಾಮಿ, ರಮೇಶ್ ರಾವ್, ಎಎಚ್ಸಿಗಳಾದ ಎಚ್.ಕೆ.ಸೋಮಣ್ಣ, ಮಹೇಶ್, ಚಂದ್ರ, ಎಂ.ಆರ್.ಸಂದೇಶ, ರುದ್ರಪ್ಪ, ಎಸಿಪಿ ಸುರೇಶ್ ಮಳಲಿ, ಕೃಷ್ಣ (ಸಹಾಯಕ ಕರ್ತವ್ಯ) ಅವರಿಗೆ ಬಹುಮಾನ ನೀಡಲಾಯಿತು.
ಅಶ್ವಾರೋಹಿ ದಳದ ಕಮಾಂಡೆಂಟ್ ಎಂ.ಜಿ.ನಾಗರಾಜು, ಡಿವೈಎಸ್ಪಿ ಸುರೇಶ್, ಪಿಐಗಳಾದ ರಾಜು ಮತ್ತು ಬಸಪ್ಪ ಸಾತನೂರು ಮತ್ತಿತರರು ಹಾಜರಿದ್ದರು.