ಮೈಸೂರು: ಮುಂದಿನ 50 ವರ್ಷಗಳ ಜನದಟ್ಟಣೆ, ವಾಹನಗಳ ಓಡಾಟಕ್ಕೆ ತಕ್ಕಂತೆ ನಗರದ ಹೊರವಲಯದಲ್ಲಿ ಮತ್ತೊಂದು ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್ )ತಯಾರಿಸಲು ಇನ್ನೊಂದು ವಾರದಲ್ಲಿ ಕಡಿಮೆ ದರದಲ್ಲಿ ಬಿಡ್ ಹಾಕಿರುವ ಏಜೆನ್ಸಿಗೆ ಟೆಂಡರ್ ನೀಡಲಾಗುತ್ತಿದೆ.
ಡಿಪಿಆರ್ ತಯಾರಿಸಲು ಖಾಸಗಿಯವರಿಗೆ ವಹಿಸಲು 5 ಕೋಟಿ ರೂ. ಒಳಗೆ ಟೆಂಡರ್ ಕರೆಯುವಂತೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿತ್ತು. ಅದರಂತೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಡಿಪಿಆರ್ ತಯಾರಿಸಲು ಟೆಂಡರ್ ಕರೆದಿದೆ. ಮುಂದಿನ ವಾರ ಕಡಿಮೆ ದರದಲ್ಲಿ ಹಾಕಿರುವ ಸಂಸ್ಥೆಗೆ ವಹಿಸಲಾಗುತ್ತಿದೆ. ಪ್ರತಿಷ್ಠಿತ ಮೂರು ಏಜೆನ್ಸಿಗಳು ಭಾಗವಹಿಸಿವೆ. ಜಾಗತಿಕ ಮಟ್ಟದ ಏಜೆನ್ಸಿಗಳು ಡಿಪಿಆರ್ ತಯಾರಿಸಲು ಮುಂದಾಗಿ ಟೆಂಡರ್ ಮೊತ್ತವನ್ನು ಜಾಸ್ತಿ ಹಾಕಿದ್ದರಿಂದ ಸರ್ಕಾರ ನಿಗದಿಪಡಿಸಿರುವ ಮೊತ್ತದೊಳಗೆ ಟೆಂಡರ್‌ನ್ನು ಕೊಡಬೇಕಾಗಿದೆ. ಹೀಗಾಗಿ ಮುಂದಿನ ಒಂದು ವಾರದೊಳಗೆ ಅಂತಿಮವಾಗಲಿದೆ. ನಂತರ, ಡಿಪಿಆರ್ ತಯಾರಿಸುವ ಪ್ರಕ್ರಿಯೆ ಶುರುವಾಗಲಿದೆ ಎಂದು ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಹೇಳಿದರು.