ಮೈಸೂರು: ಜೆಎನ್ 1 ಹೊಸ ತಳಿಯ ಕೋವಿಡ್ ಕಂಡು ಬರುತ್ತಿದ್ದು, ಹೊಸ ತಳಿಗೆ ಚಿಕಿತ್ಸೆ ನೀಡಲು ಹಾಗೂ ಹರಡದಂತೆ ತಡೆಗಟ್ಟಲು ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ. ವಿ ರಾಜೇಂದ್ರ ಅವರು ತಿಳಿಸಿದರು.
ನಗರದ ಬಾಬು ಜಗಜೀವನ್ ರಾಂ ಭವನದಲ್ಲಿ ಕೋವಿಡ್ ನಿರ್ವಹಣೆ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಜೆಎನ್1 ಹೊಸ ತಳಿಯ ಕೋವಿಡ್ ಹರಡುತ್ತಿದ್ದು ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
60 ವರ್ಷ ಮೇಲ್ಪಟ್ಟ ವರು, ಹೃದಯ ಸಂಬಂಧಿ ಕಾಯಿಲೆ ಗಳು ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ಲಕ್ಷಣ ಇರುವವರು ಕೊವಿಡ್ ಟೆಸ್ಟ್ ಮಾಡಿಸಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ.
ಕೇರಳ ಮತ್ತು ತಮಿಳುನಾಡು ಚೆಕ್ ಪೋಸ್ಟ್ ಗಳಲ್ಲಿ ಅವರಿಗೆ ಅರ್ಥ ಆಗುವ ಭಾಷೆಯಲ್ಲಿ ಕೋವಿಡ್ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಮಾಹಿತಿಯನ್ನು ಪ್ರದರ್ಶನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ 5 ಬೆಡ್ ಗಳನ್ನು ಹಾಗೂ 2 ಆಕ್ಸಿಜನ್ ವೆಂಟಿಲೇಟರ್ ಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಕೋವಿಡ್ ಹೆಚ್ಚಾದಾಗ ಕೈಗೊಳ್ಳಬೇಕಾದ ಕುರಿತು ಮಾಕ್ ಡ್ರಿಲ್ ಮಾಡಿ.
ಮುಂದಿನ ಒಂದು ವಾರದ ನಂತರ ದಿನಕ್ಕೆ ಕನಿಷ್ಟ 1000 ಕೋವಿಡ್ ಟೆಸ್ಟ್ ಮಾಡುವ ಹಾಗೆ ಯೋಜನೆ ರೂಪಿಸಿಕೊಳ್ಳಿ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ದೊರೆಯುವಂತೆ, ಜಂಬೋ ಸಿಲಿಂಡರ್ ಗಳು ಇರುವಂತೆ ನೋಡಿಕೊಳ್ಳಬೇಕು. ಅಗತ್ಯ ಮೆಡಿಷಿನ್ ಇರುವಂತೆ ಆರೋಗ್ಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಪಾಂಪ್ಲೆಟ್ ಗಳನ್ನು ಪ್ರದರ್ಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.