ಹನೂರು: ರಾಜ್ಯದಲ್ಲಿ ದಲಿತ ಸಮುದಾಯ ಇಂದಿಗೂ ಬೇಡುವ ಸಮುದಾಯವಾಗಿರುವುದಕ್ಕೆ ಕಾರಣವೇನೆಂಬುದನ್ನು ಸಮುದಾಯದವರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿಗಳು ಮಾರ್ಮಿಕವಾಗಿ ನುಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯದ ಭವನದಲ್ಲಿ ಮೀಸಲಾತಿ ಹೋರಾಟ ಸಮಿತಿ ಹನೂರು ವತಿಯಿಂದ ಏರ್ಪಡಿಸಲಾಗಿದ್ದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ 3 ರಷ್ಟಿರುವ ಬ್ರಾಹ್ಮಣ ಇನ್ನಿತರೆ ಮೇಲುವರ್ಗದ ಮಂದಿ ಪ್ರಧಾನಮಂತ್ರಿ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ದಲಿತರಿಗೆ ಇಂದಿಗೂ ಸಾಧ್ಯವಾಗಿಲ್ಲ. ಇದರಿಂದ ದೇಶದ ಸಂವಿಧಾನ ಹಾಗೂ ಮೀಸಲಾತಿಗೆ ಕಂಟಕ ಎದುರಾಗಿದೆ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿಲ್ಲ. ಉಪ ಮುಖ್ಯಮಂತ್ರಿಗೆ ಬೇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಜನತೆ ಒಗ್ಗಟ್ಟನ್ನು ತೋರಬೇಕಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತ ಮತ್ತು ಹಿಂದುಳಿದ ವರ್ಗಗಳ ಸಮುದಾಯಕ್ಕೆ ನ್ಯಾಯ ಕಲ್ಪಿಸುವ ದಿಸೆಯಲ್ಲಿ ಸಂವಿಧಾನದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅನುಕೂಲಗಳನ್ನು ಕಲ್ಪಿಸಿದ್ದಾರೆ ಎಂಬುದನ್ನು ಮರೆಯಬಾರದು ಎಂದ ಅವರು ಡಾ.ಬಿ.ಆರ್. ಅಂಬೇಡ್ಕರ್ ತ್ಯಾಗವನ್ನು ಸ್ಮರಿಸಬೇಕಾಗಿದೆ. ತಮ್ಮ ಸಮುದಾಯಕ್ಕಾಗಿ ತಮ್ಮ ಮಕ್ಕಳು ಮಡದಿಯನ್ನು ಕಳೆದುಕೊಂಡಿದ್ದಾರೆ.
ಸಮುದಾಯದ ಜನತೆ ಉನ್ನತ ಹುದ್ದೆಗಳನ್ನು ಅಲಂಕರಿಸುವ ಕನಸನ್ನು ಡಾ.ಬಿ.ಆರ್ ಅಂಬೇಡ್ಕರ್ ಕಂಡಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ವಕೀಲರಾದ ಮೋಹನ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್ ಮಾತನಾಡಿದರು. ಈ ಸಂದರ್ಭದಲ್ಲಿಸಿದ್ಧರಾಮ ಸ್ವಾಮೀಜಿ, ಪಟ್ಟಣ ಪಂಚಾಯಿತಿ ಸದಸ್ಯ ಸಂಪತ್ ಕುಮಾರ್, ಮಾಜಿ ಸದಸ್ಯರಾದ ಬಸವರಾಜು, ರೈತ ಮುಖಂಡ ಅಣಗಳ್ಳಿ ಬಸವರಾಜ್, ದಸಂಸ ಮೈಸೂರು ಸಂಚಾಲಕ ದೊಡ್ಡಿಂದವಾಡಿ ಸಿದ್ದರಾಜು, ಸಿದ್ದರಾಜ್ ಬಿ.ದಲಿತ್, ಶೇಖರ್ ಬುದ್ಧ, ಶೋಭಾ, ವಿವಿಧ ಗ್ರಾಮಗಳ ಯಜಮಾನರುಗಳು, ಯುವಕರು ಇನ್ನಿತರರು ಹಾಜರಿದ್ದರು.