ಮೈಸೂರು: ಮಂಗಳೂರು ಕುಕ್ಕರ್ ಸೋಟದ ಪ್ರಮುಖ ಆರೋಪಿ ಶಾರಿಖ್ ಮೈಸೂರಿನಲ್ಲಿದ್ದಾಗ ರೂಪಿಸಿದ ಯೋಜನೆಗಳು, ಇಲ್ಲಿಂದ ಪ್ರಯಾಣ ಮಾಡಿದ ವಿವರಗಳನ್ನು ಕಲೆ ಹಾಕಲು ಪೊಲೀಸರು ಮುಂದಾಗಿದ್ದು, ಹಲವಾರು ಕುತೂಹಲಕಾರಿ ಅಂಶಗಳು ಬಯಲಾಗಿವೆ.
ಶಾರಿಖ್ ನಗರದಲ್ಲಿ ಎಲ್ಲೆಲ್ಲಿ ಓಡಾಡಿದ್ದ, ಯಾರ್ಯಾರೊಂದಿಗೆ ಸಂಪರ್ಕದಲ್ಲಿದ್ದ ಎಂಬ ಬಗ್ಗೆ ಎರಡು ದಿನಗಳ ಮಾಹಿತಿ ಕಲೆ ಹಾಕಿರುವ ಮಂಗಳೂರು ಪೊಲೀಸರು, ಈಗ ಆತನ ಪ್ರಯಾಣದ ಹಿಸ್ಟರಿಯನ್ನು ಗುಪ್ತವಾಗಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಶಾರಿಖ್ ಯಾವ ವಾಹನದಲ್ಲಿ ಯಾವ್ಯಾವ ಊರುಗಳಿಗೆ ಪ್ರಯಾಣ ಮಾಡಿದ್ದಾನೆ. ಹೀಗೆ ಹೋದ ಸ್ಥಳಗಳಲ್ಲಿ ಯಾರನ್ನು ಭೇಟಿ ಮಾಡಿದ್ದಾನೆ ಎಂಬ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.ಆತ ಒಂದು ಬಾರಿ ಬಸ್ಸಿನಲ್ಲಿ ಮತ್ತೊಂದು ಬಾರಿ ರೈಲಿನಲ್ಲಿ ಮಂಗಳೂರಿಗೆ ಪ್ರಯಾಣ ಮಾಡಿದ್ದಾನೆ ಎನ್ನುವುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲನೆ ನಡೆಸಿ ದಾಖಲೆ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಶಾರಿಖ್ ಮನೆಗೆ ಯಾವಾಗ ಬರುತ್ತಾನೆ ಎಂಬುದೇ ಅಕ್ಕಪಕ್ಕದವರಿಗೆ ಗೊತ್ತಾಗುತ್ತಿರಲಿಲ್ಲ ಎಂಬ ಅಂಶವು ತಿಳಿದು ಬಂದಿದೆ. ಈ ರಸ್ತೆಯಲ್ಲಿ ಇರುವ ಬಹುತೇಕ ನಿವಾಸಿಗಳಿಗೆ ಈ ಪ್ರಕರಣದಿಂದ ಅವನ ಚಹರೆ ಮತ್ತು ಇಲ್ಲೆಯಿದ್ದ ಎಂಬುದು ಅರಿವಿಗೆ ಬಂದಿದೆ. ಇನ್ನು ಮನೆಯಲ್ಲಿಯೇ ಇದ್ದರೂ ಹೆಚ್ಚು ಹೊರೆಗೆ ಬರುತ್ತಿರಲಿಲ್ಲ. ಸ್ನೇಹಿತರೂ ಬಂದರೂ ಗೊತ್ತಾಗುತ್ತಿರಲಿಲ್ಲ. ಆತ ಊಟ ಮತ್ತು ತಿಂಡಿಯನ್ನು ಹೊರಗೆ ಮಾಡುತ್ತಿದ್ದ . ಆದರೂ, ಮನೆಯಲ್ಲಿ ಆಗಾಗ ಏನನ್ನೋ ಕತ್ತರಿಸುವ ರೀತಿ, ಮಿಕ್ಸಿ ಆನ್ ಆದಾಗ ಬರುವ ರೀತಿ ಶಬ್ಧಗಳು ಬರುತ್ತಿದ್ದವು. ಇದರಿಂದ ಸ್ಪೋಟಕ್ಕೆ ಇಲ್ಲಿಯೇ ತಯಾರಿ ಮಾಡುತ್ತಿರಬಹುದು ಎನ್ನುವ ಅನುಮಾನವೂ ಪೊಲೀಸರನ್ನು ಕಾಡುತ್ತಿದೆ.
ಮನೆಗೆ ಪೊಲೀಸ್ ಕಾವಲು: ತನಿಖೆಯ ಹಿನ್ನೆಲೆಯಲ್ಲಿ ಆತ ಇದ್ದ ಬಾಡಿಗೆ ಮನೆಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಬೀಗ ಜಡಿದು ಪಾಳಿ ಲೆಕ್ಕದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಮನೆಯಿರುವ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿದೆ.