ಕಲಾಮಂದಿರದಲ್ಲಿ ನಡೆದಿದ್ದ ೫೩೫ನೇ ಕನಕದಾಸರ ಜಯಂತ್ಯೋತ್ಸವದಲ್ಲಿ ಮಾಜಿ ಸಿಎಂ ವಾಗ್ದಾಳಿ
ಮೈಸೂರು: ಜಾತಿವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಲು ಸುಧಾರಣಾವಾದಿಗಳು ಎಷ್ಟೇ ಪ್ರಯತ್ನಪಟ್ಟರೂ ಪಟ್ಟಭದ್ರರ ಹಿತಾಸಕ್ತಿಯಿಂದ ಮುಂದುವರಿದಿದ್ದು, ಆರ್ಎಸ್ಎಸ್, ಸಂಘ ಪರಿವಾರದವರಿಗೆ ಸಮಾಜ ಬದಲಾವಣೆಯಾಗದೆ ಯಥಾಸ್ಥಿತಿ ಉಳಿಯವ ಅಪೇಕ್ಷೆಯಾಗಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಲಾಮಂದಿರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಆಯೋಜಿಸಿದ್ದ ಸಂತ ಶ್ರೇಷ್ಠ ಶ್ರೀಭಕ್ತ ಕನಕದಾಸರ 525ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮೈಸೂರು ನಗರ,ಜಿಲ್ಲೆ, ತಾಲ್ಲೂಕು ಸಮಿತಿ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳಿಂದ ಜಾತಿ ವ್ಯವಸ್ಥೆ ವಿರುದ್ಧ ಮಾತನಾಡುತ್ತಿದ್ದೇವೆಯೇ ಹೊರತು ನಿರ್ಮೂಲನೆ ಮಾಡಲು ಆಗಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್ ಗಾಂಧಿಯಂತಹ ನಾಯಕರು ಇಲ್ಲಿನ ಅಸಮಾನತೆಗಳ ವಿರುದ್ಧ ಸೆಟೆದು ನಿಂತರು. ಸಾಮಾಜಿಕ ಅಸಮಾನ ವ್ಯವಸ್ಥೆಯಲ್ಲಿ ನೋವುಂಡವರಿಂದ ಮಾತ್ರ ಏನಾದರು ಬದಲಾವಣೆ ತರಲು ಸಾಧ್ಯ. ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಬೆಂಗಳೂರಿನ ಶಾಸಕರ ಭವನದ ಎದುರು ವಾಲ್ಮೀಕಿ, ಕನಕದಾಸರ ಪ್ರತಿಮೆಯನ್ನು ನಿರ್ಮಾಣ ಮಾಡಿದವರು ನಾವು. ಅದರಿಂದ ಲಾಭ ಪಡೆಯುವವರು ಬೇರೆ. ನಾಜೂಕಾಗಿ ಮಾತನಾಡುವವರನ್ನು ವಿರೋಧಿಸಬೇಕಾ ಬೇಡವೇ ಎನ್ನುವ ಚರ್ಚೆ ಮಾಡಬೇಕು. ಯಾರು ಸುಳ್ಳು ಹೇಳುತ್ತಾರೆ ಅಥವಾ ಸತ್ಯ ಹೇಳುವವರು ಎನ್ನುವುದನ್ನುಯೋಚಿಸಿ ನಿರ್ಧರಿಸಬೇಕು ಎಂದು ಸಲಹೆ ನೀಡಿದರು.
ವಿದ್ಯೆ ಹೇಳಲು ನಿರಾಕರಣೆ
ಕನಕದಾಸರು ಶೂದ್ರ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ವ್ಯಾಸರಾಯರು ವಿದ್ಯೆ ಹೇಳಿಕೊಡಲು ನಿರಾಕರಿಸಿದರು. ವ್ಯಾಸರಾಯ ಅವರಂತಹ ಮೇಲ್ಜಾತಿಯ ಸಂತರಿಂದ ಕನಕದಾಸರು ಸಾಕಷ್ಟು ಅವಮಾನ, ಕಷ್ಟಗಳನ್ನು ಎದುರಿಸಿದರು. ತಮ್ಮ ಜ್ಞಾನದ ಮೂಲಕ ನಳಚರಿತ್ರೆ, ಮೋಹನ ತರಂಗಿಣಿ, ರಾಮದಾಸ ಚರಿತೆ ಎಂಬ ಕೃತಿಗಳನ್ನು ರಚಿಸಿದರು.ಅಂದು ಸಮಾಜದಲ್ಲಿ ಆಳವಾಗಿ ಬೇರುರಿದ್ದ ಸಾಮಾಜಿಕ ಅಸಮಾನತೆಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಹೇಳಿದರು.
ನಾನು ಲಾ ಓದುವಾಗ ವಿಶ್ವನಾಥ್ ಜೊತೆಗೆ ಸೇರಿಕೊಂಡು ಕನಕದಾಸರ ಯುವ ಬಳಗ ಸ್ಥಾಪನೆ ಮಾಡಲು ಹೊರಟಾಗ ಅನೇಕರು ಜಾತಿ ಹೆಸರೇಳಲು ಬರಲಿಲ್ಲ. ಕೊನೆಗೆ ಅವರವರ ಮನೆಗೆ ಹೋಗಿ ವಿಚಾರ ಹೇಳಿದಾಗ ಕೊನೆಗೆ ಧೈರ್ಯ ಮಾಡಿ ಬಂದರು. ನಂತರ, ಸಂಘಟನೆ ಮಾಡಿ ಜಾಗೃತಿ ಮೂಡಿಸಲಾಯಿತು. 1989ರಲ್ಲಿ ಚುನಾವಣೆಯಲ್ಲಿ ಸೋತಾಗ ಐದು ವರ್ಷಗಳ ಕಾಲ ರಾಜ್ಯಾದ್ಯಂತ ಸುತ್ತಾಡಿ ಕನಕದಾಸರ ಜಯಂತಿಯನ್ನು ಆಚರಣೆ ಮಾಡುವಂತೆ ನೋಡಿಕೊಂಡೆವು ಎಂದು ಹಳೆಯದನ್ನು ಮೆಲುಕು ಹಾಕಿದರು.
ದೇಶದಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸ ನಿರಂತರವಾಗಿ ನಡೆದಿದೆ. ಮುಸ್ಲಿಂ ಸಮುದಾಯದವರನ್ನು ಬಿದಿರು ಬೊಂಬೆಯಂತೆ ಮಾಡಿಕೊಂಡು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದವರು ಟೀಕಿಸಿದರು.
ಸನ್ಮಾನ, ಪ್ರತಿಭಾ ಪುರಸ್ಕಾರ
ಇದೇ ವೇಳೆ ಕುರುಬ ಸಮುದಾಯದ 250 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮುದಾಯದ 25 ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್,ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಡಿ.ರವಿಶಂಕರ್, ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಶಿವಪ್ಪ,ತಾಲ್ಲೂಕು ಅಧ್ಯಕ್ಷರಾದ ಡಿ.ಕೆ.ಕುನ್ನೇಗೌಡ, ಎಂ.ಬಿ.ಆನಂದ್, ಶಿವಣ್ಣ, ಎಚ್.ಡಿ.ಗಣೇಶ್, ಬಸವರಾಜು, ಮಹೇಶ್, ರಾಜ್ಯ ಸಂಘದ ಹಿರಿಯ ಉಪಾದ್ಯಕ್ಷರಾದ ರೇಖಾ ಪ್ರಿಯದರ್ಶಿನಿ, ನಿರ್ದೇಶಕರಾದ ಗೋಪಿ, .ಅಭಿಲಾಷ್,ನಾಗರಾಜು,ಕೆ.ಮಾದೇಗೌಡ ಹಾಜರಿದ್ದರು.
ಸಿದ್ದರಾಮಯ್ಯರಿಗೆ ಬೆಳ್ಳಿ ಖಡ್ಗ
ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ “ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯʼʼ ಎನ್ನುವ ಹೆಸರಿನಲ್ಲಿ ತಂದಿರಿಸಿದ್ದ ಕೇಕ್ ಅನ್ನು ಕತ್ತರಿಸಿದರು. ಶ್ರೀನಿರಂಜನಾನಂದಪುರಿ ಸ್ವಾಮೀಜಿ ಕೇಕ್ ತಿನ್ನಿಸಿದರು. ಬಳಿಕ ಶ್ರೀಗಳಿಗೆ ಕಿರೀಟ ಧಾರಣೆ ವಾಡಲಾಯಿತು. ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಖಡ್ಗವನ್ನು ನೀಡಿದಾಗ ಅದನ್ನು ಹಿಡಿದು ಸಭಿಕರತ್ತ ಪ್ರದರ್ಶಿಸಿದರು. ಈ ವೇಳೆ ನೆರೆದಿದ್ದ ಜನಸ್ತೋಮ ಜೈಕಾರದ ಘೋಷಣೆ ಮೊಳಗಿಸಿದರು.
ಜನರನ್ನು ನಿಯಂತ್ರಿಸಿದ ಸಿದ್ದು
ವೇದಿಕೆಯಲ್ಲಿ ತುಂಬಿ ತುಳುಕಿದ್ದ ಜನರನ್ನು ಸಿದ್ದರಾಮಯ್ಯ ಅವರೇ ನಿಯಂತ್ರಿಸಿದರು. ಪ್ರೊ. ಅರವಿಂದ ಮಾಲಗತ್ತಿ ಅವರು ಮುಖ್ಯ ಭಾಷಣಕ್ಕೆ ಮುಂದಾಗುತ್ತಿದ್ದಂತೆ ವೇದಿಕೆಯಲ್ಲಿ ನಾಯಕರು ತುಂಬಿ ತುಳುಕಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಮೈಕ್ ಹಿಡಿದು ಕೆಲವರನ್ನು ಕೈ ಬೀಸಿ ಹಿಂದಕ್ಕೆ ಕಳುಹಿಸುವ ಮೂಲಕ ಭಾಷಣಕ್ಕೆ ಅನುವು ಮಾಡಿಕೊಟ್ಟರು.