ಮೈಸೂರಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣವಾದ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡುವ ವಿಚಾರ ಸದ್ಯ ಮತ್ತೆ ಮುನ್ನೆಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ನಾವು ಸಿದ್ಧ ಎಂದು ಹೇಳಿಕೆ ನೀಡಿದ್ದು ಸದ್ಯ ಇದರ ವಿರುದ್ಧ ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ.
ಈ ಸಂಬಂಧ ಇದೀಗ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಸಹ ಮಾತನಾಡಿದ್ದು, ಇದಕ್ಕೆ ತಮ್ಮ ವಿರೋಧವಿದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡುವ ಅಗತ್ಯವಿಲ್ಲ, ನಂದಿ ಬೆಟ್ಟಕ್ಕೆ ಬೇಕಾದರೆ ರೋಪ್‌ವೇ ಮಾಡಿಕೊಳ್ಳಲಿ. ಈ ಹಿಂದೆಯೇ ಶಾಸಕ ಜಿಟಿ ದೇವೇಗೌಡ ಹಾಗೂ ನಾವೆಲ್ಲರೂ ಸಭೆ ನಡೆಸಿ ಇದರ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ. ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಮಾಡಲು ನಮ್ಮ ಪ್ರಬಲ ವಿರೋಧವಿದೆ. ಚಾಮುಂಡಿ ಬೆಟ್ಟ ಪ್ರೇಕ್ಷಣೀಯ ಸ್ಥಳವಲ್ಲ, ಧಾರ್ಮಿಕ ತಾಣ. ಚಾಮುಂಡಿ ಬೆಟ್ಟಕ್ಕೆ ಭಕ್ತಿ ಭಾವದಿಂದ ಹೋಗಬೇಕು. ಚಾಮುಂಡಿ ಬೆಟ್ಟ ರೋಪ್ ವೇನಲ್ಲಿ ಹೋಗಿ ನೋಡುವಂತಹ ಸ್ಥಳವಲ್ಲ, ರೋಪ್ ವೇಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿಕೆಯನ್ನು ನೀಡಿದರು.





