ಮೊದಲನೇ ಅಪರಾಧಿಗೆ 22 ವರ್ಷ, 2ನೇ ಅಪರಾಧಿಗೆ 3 ವರ್ಷ ಸಜೆ
ಮಂಡ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದು ಹಾಗೂ ಲೈಂಗಿಕ ಕಿರುಕುಳ ನೀಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಮೊದಲನೇ ಅಪರಾಧಿಗೆ 22 ವರ್ಷ ಕಠಿಣ ಸಜೆ, 50 ಸಾವಿರ ರೂ. ದಂಡ ಹಾಗೂ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ 3 ವರ್ಷ ಜೈಲು ಸಜೆ ಹಾಗೂ 19 ಸಾವಿರ ರೂ. ದಂಡ ವಿಧಿಸಿ ಮಂಡ್ಯದ 2ನೇ ಅಧಿಕ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಹಲಗೂರು ಬಳಿಯ ಗ್ರಾಮವೊಂದರ ರವಿ ಹಾಗೂ ಮಹೇಶ್ ಎಂಬವರೇ ಶಿಕ್ಷೆಗೊಳಗಾದವರು.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪಾಲಕರು ಕೂಲಿ ಕೆಲಸಕ್ಕೆಂದು ಹೊರಗೆ ಹೋದ ವೇಳೆ 7ನೇ ತರಗತಿ ವಿದ್ಯಾರ್ಥಿನಿ ಮೇಲೆ ರವಿ ಅತ್ಯಾಚಾರ ಎಸಗಿದ್ದನು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಸಿ ದೈಹಿಕ ಸಂಪರ್ಕ ಹೊಂದಿದ್ದನು. ಪರಿಣಾಮ ಅಪ್ರಾಪ್ತೆ ಗರ್ಭಿಣಿಯಾಗಿದ್ದಳು.
ಇತ್ತ ನನ್ನೊಂದಿಗೂ ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆ ಮಹೇಶ್ ಕಿರುಕುಳ ನೀಡಿದ್ದನು. ಇಬ್ಬರ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧವಾಗಿ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎ.ನಾಗಜ್ಯೋತಿ ಅವರು ಇಬ್ಬರು ಆರೋಪಿಗಳಿಗೂ ಶಿಕ್ಷೆ ಪ್ರಕಟಿಸಿದ್ದಾರೆ.
ಸರ್ಕಾರಿ ಅಭಿಯೋಜಕಿ ಪಿ.ಕೆ.ಶಕೀಲಾ ಅಬೂಬಕರ್ ಅವರು ವಾದ ಮಂಡಿಸಿದ್ದರು.





