ಮಂಡ್ಯ : ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಈ ನಷ್ಷವನ್ನು ತುಂಬಲು ಪರಿಹಾರವಾಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಅವರು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ದರ್ಶನ್ ಪುಟ್ಟಣ್ಣಯ್ಯ ಅವರು ಮಂಡ್ಯ ಜಿಲ್ಲೆಯಾದ್ಯಂತ ಕಳೆದ 3 ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿನ ಜನ – ಜಾನುವಾರು , ಕೃಷಿ – ತೋಟಗಾರಿಕೆ ಬೆಳೆಗಳ ಹಾನಿ , ಶಾಲೆಗಳು , ಆಸ್ಪತ್ರೆಗಳು , ಗ್ರಾಮೀಣ ರಸ್ತೆಗಳು / ಲೋಕೋಪಯೋಗಿ ರಸ್ತೆಗಳು , ಪಟ್ಟಣ ಪಂಚಾಯಿತಿ / ನಗರಸಭೆ / ಪುರಸಭೆ , ಸಣ್ಣ ನೀರಾವರಿ , ವಿದ್ಯುತ್ ಕಂಬಗಳ ಲೈನ್ಗಳು ಸೇರಿದಂತೆ ಜಿಲ್ಲೆಯ ಮೂಲಭೂತ ಸೌಲಭ್ಯ ಭಾರಿ ಪ್ರಮಾಣದಲ್ಲಿ ಹಾನಿಯಾಗಿದ್ದು ಸರಿಯಷ್ಟೇ .
264.54 ಹೆಕ್ಟೇರ್ ಕೃಷಿ ಬೆಳೆಹಾನಿ , 707.81 ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಹಾನಿ, 259 ಶಾಲೆಗಳಿಗೆ ಹಾನಿ, 535 ಶಾಲಾ ಕೊಠಡಿ ಹಾನಿ, 51 ಸೇತುವೆಗಳು, 25 ಅಂಗನವಾಡಿ ಕೇಂದ್ರಗಳ ಹಾನಿ, 245.4 ಕಿ.ಮೀ. 180 ಹಳ್ಳಿಗಳ ರಸ್ತೆಗಳು ಹಾಳಾಗಿವೆ . 1000 ಹೆಚ್ಚು ಮನೆಗಳು ಹಾನಿಯಾಗಿವೆ ಎಂದು ಅಂಕಿ ಅಂಶದ ಸಮೇತ ಅವರು ತಮ್ಮ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಹಸಿಬರ ಘೋಷಣೆ ಮಾಡಿ ನೊಂದ ಜನರ ಕಣ್ಣೀರು ಒರೆಸುವ ಕೆಲಸ ಮಾಡಿ, ರೈತರ ನೋವಿಗೆ ಸ್ಪಂಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ.