Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಕಾಂಗ್ರೆಸ್ ನಾಯಕರಿಗೆ ಸವಾಲಾದ ರಾಹುಲ್ ಫಿಟ್ನೆಸ್ ಟೆಸ್ಟ್

ಆಂದೋಲನ ವಿಶೇಷ

ಮೈಸೂರು: ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ದೇಹಕ್ಷಮತೆಗೆ ಹಸರಾದವರು. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ರಾಹುಲ್ ಗಾಂಧಿ ನುರಿತ ಈಜುಪಟುವು ಹೌದು. ಪ್ರತಿದಿನ ಜಿಮ್ಗೆ ಹೋಗಿ ವರ್ಕೌಟ್ ಮಾಡುವ ರಾಹುಲ್ ಗಾಂಧಿ ತಮ್ಮ 52ನೇ ವಯಸ್ಸಿನಲ್ಲೂ ಯುವಕನಂತೆ ಕಾಣಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದೀರ್ಘವಾದ ಪಾದಯಾತ್ರೆ ಕೈಗೊಂಡರೂ ಅವರ ಮುಖದಲ್ಲಿ ಎಂದೂ ಸುಸ್ತು ಕಂಡಿಲ್ಲ.


ಆದರೆ ಕಾಂಗ್ರೆಸ್ ನಾಯಕನ ಈ ಫಿಟ್ನೆಸ್ ಮಂತ್ರ ರಾಜ್ಯ ನಾಯಕರಿಗೆ ಪೀಕಲಾಟ ತಂದಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ವೇಗದ ಹೆಜ್ಜೆ ಹಾಕುವ ರಾಹುಲ್ ಜತೆಗೆ ನಡೆಯುವುದೇ ರಾಜ್ಯ ನಾಯಕರಿಗೆ ಸವಾಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ಗೆ ಜತೆಜತೆಯಾಗಿ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.

ಆದರೆ ಪಕ್ಷದ ಪಾಲಿಗೆ ಇನ್ನೂ ಯುವ ನಾಯಕನಾಗಿರುವ ರಾಹುಲ್ ಜತೆ ಹೆಜ್ಜೆ ಹಾಕುವುದು ಇಬ್ಬರೂ ನಾಯಕರಿಗೂ ತುಸು ಕಷ್ಟವೆನಿಸಿದೆ. ಇ.ಡಿ ವಿಚಾರಣೆಯ ಸಂದರ್ಭದಲ್ಲಿ ಗೈರುಹಾಜರಾಗಿದ್ದು ಬಿಟ್ಟರೆ ಡಿಕೆಶಿ ಅವರು ರಾಹುಲ್ ಜತೆಗೆ ಸಾಗುತ್ತಾ ಬಂದಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಜತೆಗಿನ ಮೀಸಲಾತಿ ಸಭೆ ಸೇರಿದಂತೆ ಒಂದಷ್ಟು ನೆಪ ಇಟ್ಟುಕೊಂಡು ಮಧ್ಯೆ, ಬಿಡುವು ಮಾಡಿಕೊಂಡಿದ್ದಾರೆ.

ಪಾದಯಾತ್ರೆಯ ನಡುವೆ ರಾಹುಲ್ ತೋರುವ ಅತ್ಯುತ್ಸಾಹ ಈ ಇಬ್ಬರು ನಾಯಕರನ್ನು ಸಮಸ್ಯೆಗೆ ಸಿಲುಕಿಸುತ್ತಿದೆ. ವಿಜಯದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ವಿರಾಮದ ಬಳಿಕ ನಾಗಮಂಗಲದಿಂದ ಆರಂಭವಾದ ಯಾತ್ರೆಯಲ್ಲಿ ರಾಹುಲ್ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರ ಕೈ ಹಿಡಿದು ಓಡಲಾರಂಭಿಸಿದರು. 75ರ ಹರೆಯ ದಾಟಿದ ಸಿದ್ದರಾಮಯ್ಯ ಅವರೂ ಉತ್ಸಾಹದಿಂದ ರಾಹುಲ್ ಜತೆ ಹೆಜ್ಜೆ ಹಾಕಿದರು.

ಕೆಲವೇ ಮೀಟರ್ ದೂರಕ್ಕೆ ಈ ಓಟ ಸೀಮಿತವಾದ ಕಾರಣ ಸಿದ್ದು ಅವರಿಗೆ ಇದು ಕಷ್ಟವೆನಿಸಲಿಲ್ಲ. ಆದರೆ ಅವರ ವಯಸ್ಸಿನ ಹಿರಿತನಕ್ಕೆ ಇದು ನಿಜಕ್ಕೂ ಸವಾಲಾಗಿತ್ತು. ಈ ಹಿಂದೆ ಹಲವು ಪಾದಯಾತ್ರೆಗಳಲ್ಲಿ ಭಾಗವಹಿಸಿದ ಅನುಭವ ಇರುವ ಸಿದ್ದು ಅವರಲ್ಲಿ ಈಗಲೂ ಅದೇ ಉತ್ಸಾಹವಿದೆ. ಆದರೆ ದೇಹ ಮನಸ್ಸಿನ ಓಟಕ್ಕೆ ಸಹಕರಿಸುವ ಖಾತರಿ ಇಲ್ಲ.


ಕೋಟೆ ನಾಡು ಚಿತ್ರದುರ್ಗದಲ್ಲಿ ಜೋಡೋ ಯಾತ್ರೆ ಸಾಗುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಇದೇ ಅನುಭವವಾಯಿತು. ಕಾಂಗ್ರೆಸ್ ಧ್ವಜ ಹಿಡಿದು ಮುಂದೆ ಸಾಗುತ್ತಿದ್ದ ಡಿಕೆಶಿ ಅವರ ಕೈ ಹಿಡಿದ ರಾಹುಲ್ ಓಟ ಆರಂಭಿಸಿದರು. ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಡಿಕೆಶಿ ಓಡಿದರಾದರೂ ಅವರ ಮುಖದಲ್ಲಿ ಸುಸ್ತು ಎದ್ದು ಕಾಣುತ್ತಿತ್ತು. ಮರು ದಿನ ಯಾತ್ರೆಯ ಮಧ್ಯೆ ಸಿಕ್ಕ ಸಣ್ಣ ಹುಡುಗನೊಬ್ಬನ ಜತೆ ಸ್ಪರ್ಧೆಗೆ ಇಳಿದ ರಾಹುಲ್ ಆತನ ಜತೆ ʼದಂಡʼ ತೆಗೆದು ಖುಷಿಪಟ್ಟರು. ಆದರೆ ಆಟದಲ್ಲಿ ಭಾಗಿಯಾದ ಡಿಕೆಶಿ ಪಾಲಿಗೆ ಇದು ನಿಜಕ್ಕೂʼದಂಡʼನೆಯಂತಿತ್ತು.

ಏನೇ ಆದರೂ ಯಾತ್ರೆಯುದ್ದಕ್ಕೂ ರಾಹುಲ್ ತೋರಿಸುತ್ತಿರುವ ಉತ್ಸಾಹ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಯುವ ಜನತೆ ಈ ಉತ್ಸಾಹದಲ್ಲಿ ಭಾಗಿಯಾಗುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!