Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಪುನೀತ್ ಹೆಸರಿನಲ್ಲಿ ಭರಚುಕ್ಕಿ ಬಯೋ ಪಾರ್ಕ್?

ಎ.ಎಸ್.ಮಣಿಕಂಠ

*ಆಡಳಿತಾತ್ಮಕ ಅನುಮೋದನೆಯೊಂದೆ ಬಾಕಿ.
*೧೦೦ ಕೋಟಿ ವೆಚ್ಚದಲ್ಲಿ ಸಿದ್ಧವಾಗಲಿದೆ ಉದ್ಯಾನವನ.

ಚಾಮರಾಜನಗರ: ರಾಜ್ಯ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ನಿರ್ಮಿಸಲಿರುವ ಭರಚುಕ್ಕಿ ಬಯೋ ಡೈವರ್ಸಿಟಿ ಪಾರ್ಕ್ ಗೆ ಪುನೀತ್ ರಾಜ್ ಕುಮಾರ್ ಹೆಸರು ಹಿಡುವ ಕೂಗು ಕೇಳಿ ಬಂದಿದ್ದು, ಆದಷ್ಟು ಬೇಗ ಆಡಳಿತ ಅನುಮೋದನೆ ದೊರೆಯಬೇಕಿದೆ.

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ದೃಷ್ಟಿಯಿಂದ ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿರುವುದೆ. ಸುಮಾರು ೨೫ ವಿಭಾಗಗಳನ್ನು ಒಳಗೊಂಡಿರುವ ಈ ಉದ್ಯಾನವನ್ನು ಡಾ.ಪುನೀತ್ ರಾಜ್ ಕುಮಾರ್ ಹೆಸರಿನಲ್ಲೇ ಪ್ರಾರಂಭಿಸಬೇಕು ಹಾಗೂ ಕೂಡಲೇ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಖಾಸಗಿ ಸಮಾರಂಭ ಒಂದರಲ್ಲಿ ಒತ್ತಾಯಿಸಿದ್ದರು.

ಅಂದಾಜು ೧೫೦ ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಲಿರುವ ಈ ಬಯೋ ಪಾರ್ಕ್ ಗೆ ಸರ್ಕಾರ ೧೦೦ ಕೋಟಿ ಹಣವನ್ನು ವೆಚ್ಚ ಮಾಡಲಿದೆ. ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಸ್ಥಳೀಯ ಪ್ರವಾಸಿಗರ ಗಮನ ಸೆಳೆಯಲು ಇದು ಅತ್ಯಂತ ಉಪಯುಕ್ತವಾಗಿದೆ. ಆದಷ್ಟು ಬೇಗ ಡಾ.ಪುನೀತ್ ರಾಜ್ ಕುಮಾರ್ ಹೆಸರಿನಲ್ಲೇ ಬಯೋ ಪಾರ್ಕ್ ನಿರ್ಮಾಣಕ್ಕೆ ಒತ್ತಡ ತರುತ್ತೇನೆ ಎಂದು ತಿಳಿಸಿದ್ದಾರೆ.

ಅನುಮೋದನೆಯೊಂದೇ ಬಾಕಿ: ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗ ಇದರ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಸರ್ಕಾರದ ಅನುಮೋದನೆಗೆ ಕಾಯುತ್ತಲೇ ಇದೆ. ಈ ಉದ್ದೇಶಿತ ಪಾರ್ಕ್‌ ಭರಚುಕ್ಕಿ ಜಲಪಾತದ ಸಮೀಪವೇ ನಿರ್ಮಾಣಗೊಳ್ಳಲಿದ್ದು ಮೊದಲ ಹಂತದಲ್ಲಿ ಆಕರ್ಷಕ ಹೆಬ್ಬಾಗಿಲು, ಫುಡ್ ಪಾರ್ಕ್ ಹಾಗೂ ಆಂಪಿ ಥಿಯೇಟರ್ ನಿರ್ಮಾಣ ಗೊಳ್ಳಲಿದ್ದು, ಶಿಕ್ಷಣದ ಜೊತೆಗೆ ಸಂತೋಷದಾಯಕ ಪ್ರವಾಸಕ್ಕೆ ಅನುವು ಮಾಡಿಕೊಡುವ ಪಾರ್ಕ್ ನಿರ್ಮಾಣಗೊಳ್ಳಲಿದೆ.

೨೫ ವಿಭಾಗಗಳ ಭವ್ಯ ಉದ್ಯಾನವನ: ಭರಚುಕ್ಕಿ ಬಯೋ ಉದ್ಯಾನ ಸೋಲಾರ್ ಬೆಂಬಲಿತವಾಗಿದ್ದು, ಬೋನ್ಸಾಯ್ ಗಾರ್ಡನ್, ಆರ್ಕಿಡ್ ಒಳಗೊಂಡ ವನ, ನಕ್ಷತ್ರ ಆಕಾರದ ಉದ್ಯಾನ, ಬಿದಿರು ವನ, ಅಪರೂಪದ ಸಸ್ಯಗಳ ಟ್ರೀ ಪಾರ್ಕ್, ಸೋಲಿಗರ ಬದುಕು ತೋರುವ ಟ್ರೈಬಲ್ ಪಾರ್ಕ್, ಮ್ಯೂಸಿಯಂ, ವನ್ಯ ಜೀವಿ ಪಾರ್ಕ್‌, ವೆಟ್ ಲ್ಯಾಂಡ್‌ ಪಾರ್ಕ್‌, ಚಿಟ್ಟೆ ಪಾರ್ಕ್‌, ೧.೫ ಕಿ.ಮೀ ಅಂತರದ ಸ್ಕೈವಾಕ್ ಪಥ ಒಳಗೊಂಡಂತೆ ೨೫ ಬಗೆಯ ವಿಶೇಷ ವಿನ್ಯಾಸದ ಕಲ್ಪನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರಚುಕ್ಕಿ ಜಲಪಾತವನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

ವಿಧಾನಸಭೆಯಲ್ಲಿ ೨ ಬಾರಿ ಭರಚುಕ್ಕಿ ಬಯೋ ಪಾರ್ಕ್ ನಿರ್ಮಾಣಕ್ಕೆ ಒತ್ತಡ ಮಾಡಿದ್ದೇನೆ. ಕೊಳ್ಳೇಗಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲೆ ಭರಚುಕ್ಕಿ ಉದ್ಯಾವನ ನಿರ್ಮಾಣವಾಗಬೇಕಿದೆ.

-ಎನ್.ಮಹೇಶ್,
ಶಾಸಕರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ.

ರಚುಕ್ಕಿ ೩-೪ ತಿಂಗಳು ಮಾತ್ರ ನೀರು ಲಭ್ಯವಿರುತ್ತದೆ ಇನ್ನು ಉಳಿದ ತಿಂಗಳು ಪ್ರವಾಸಿಗರನ್ನು ಸೆಳೆಯಲು ಬಯೋ ಪಾರ್ಕ್ ಅತ್ಯಗತ್ಯ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಿರ್ಮಾಣಗೊಂಡರೆ ಇನ್ನೂ ಸಂತೋಷ. ಆದಷ್ಟು ಬೇಗ ಸರ್ಕಾರ ಅನುಮೋದನೆ ನೀಡಲಿ.

-ಏಲುಕುಂಡಲು. ಹಿಂದಿನ ಅರಣ್ಯಾಧಿಕಾರಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ