ಕೊಡಗು : ಟಿಪ್ಪು ಯಾವ ಯುದ್ದದಲ್ಲಿ ಹೋರಾಡಿದ್ದ? ಹುಲಿ ಜತೆ ಪೋಸ್ ಕೊಡೋ ಫೋಟೋ ಹಾಕಿ ಟಿಪ್ಪು ವೈಭವೀಕರಣ ಮಾಡಬೇಡಿ. ಕನ್ನಡವನ್ನು ಕಗ್ಗೊಲೆ ಮಾಡಿದ ವ್ಯಕ್ತಿಯ ಪ್ರತಿಮೆ ಮಾಡುತ್ತೀರಾ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಕನ್ನಡ ಸಂಸ್ಕೖತಿ ಇಲಾಖೆ ಮೂಲಕ ಟಿಪ್ಪು ಜಯಂತಿ ಮಾಡಿಸಿದ್ದರು. ಇದು ಅರಣ್ಯ ಇಲಾಖೆಯು ವೀರಪ್ಪನ್ ಜಯಂತಿ ಮಾಡಿದಂತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಯುದ್ದದಲ್ಲಿ ಟಿಪ್ಪು ರಾಕೇಟ್ ಬಳಕೆ ಮಾಡಿದ ಉದಾಹರಣೆಯೇ ಇಲ್ಲ. ಕ್ರೌರ್ಯಕ್ಕೆ ದ್ಯೋತಕವಾಗಿದ್ದಾನೆ ಟಿಪ್ಪು. ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಟಿಪ್ಪು ವೈಭವೀಕರಣ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿದರು.
ಯಾವ ಹುಲಿ ಜತೆ ಟಿಪ್ಪು ಹೋರಾಟ ಮಾಡಿದ್ದಾನೆ. ಮನುಷ್ಯ ಹುಲಿ ಜತೆ ಹೋರಾಟ ಮಾಡಲು ಸಾಧ್ಯವೇ? ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಮನೆಯಿಂದ ಹೊರಗಡೆಯೇ ಬರಲಿಲ್ಲ. ಹೈದರಾಲಿ ಯುದ್ದ ಮಾಡಿದ ಉದಾಹರಣೆಯಿದೆ. ಟಿಪ್ಪು ಯಾವ ಯುದ್ದದಲ್ಲಿ ಹೋರಾಡಿದ್ದಾನೆ. ಕಟ್ಟು ಕಥೆಗಳ ಮೂಲಕ ಟಿಪ್ಪುವನ್ನು ಕನ್ನಡದ ಹೋರಾಟಗಾರ ಎಂದು ಹೇಳುವುದನ್ನು ನಿಲ್ಲಿಸಿ ಎಂದು ಹೇಳಿದರು.
ಟಿಪ್ಪು ಪ್ರತಿಮೆಗೆ ತೀವ್ರ ವಿರೋಧ – ಕೊಡವರಿಗೆ ಅಪಮಾನ ಮಾಡಿದ್ದ ಟಿಪ್ಪು
ದೇವಾಲಯಗಳ ಮೇಲೆ ದಾಳಿ ಮಾಡಿದ್ದ ಟಿಪ್ಪುವಿನ ಪ್ರತಿಮೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಹೀಗೇ ಬಿಟ್ಟರೆ ಮೈಸೂರನ್ನು ನಜರಾಬಾದ್, ಹಾಸನವನ್ನು ಕೈಮಾಬಾದ್ ಎಂದು ಕರೆಯಲು ಮುಂದಾಗುತ್ತಾರೆ ಎಂದು ಟೀಕಿಸಿದರು.
ಕೂಡಲೇ ಗುಂಬಜ್ ಮಾದರಿಯ ಬಸ್ ತಂಗುದಾಣ ತೆರವುಗೊಳಿಸಿ – ಇದು ಪಾರಂಪರಿಕೆ ಶೈಲಿಯ ಸಂಕೇತವಲ್ಲ. ಮೈಸೂರು ಮಹಾನಗರಪಾಲಿಕೆ ಬಸ್ ತಂಗುದಾಣದಲ್ಲಿನ ಗುಂಬಜ್ ಅನ್ನು 3-4 ದಿನಗಳಲ್ಲಿ ತೆರವು ಮಾಡದಿದ್ದಲ್ಲಿ ನಾನೇ ತೆರವು ಮಾಡುವೆ. ವಿವೇಚನರಹಿತವಾಗಿ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
16 ರಿಂದ 19 ನೇ ಶತಮಾನದವರೆಗೆ ಭಾರತದಲ್ಲಿ ಮೊಘಲರ ಆಳ್ವಿಕೆಯಿತ್ತು. ಆಗ ಇಂಡೋಸಾಸೇ೯ನಿಕ್ ಶೈಲಿಯ ವಾಸ್ತುಶೈಲಿ ಭಾರತದಲ್ಲಿತ್ತು. ಪರ್ಶಿಯಾ, ಟರ್ಕಿ, ಮೊಘಲರು ಭಾರತದ ಮೇಲೆ ದಾಳಿ ನಡೆಸಿದರು. 19 ನೇ ಶತಮಾನದಲ್ಲಿ ಭಾರತ ಬ್ರಿಟಿಷರ್ ಆಳ್ವಿಕೆಯಲ್ಲಿತ್ತು. ಆಂಗ್ಲರ ಶೈಲಿಯ ವಾಸ್ತುಶೈಲಿ ಜಾರಿಗೆ ಬಂತು. ಹೀಗಾಗಿ ದೇಶದ ಅನೇಕ ಕಡೆ ಇಂಡೋಸಾಸೇ೯ನಿಕ್ ವಾಸ್ತುಶೈಲಿಯಿಂದ ಸ್ಪೂರ್ತಿ ಪಡೆದಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ವಾಸ್ತುಶೈಲಿಯ ಕಟ್ಟಡಕ್ಕೂ ಗುಂಬಜ್ ಗಳಿಗೂ ಸಂಬಂಧ ಕಲ್ಪಿಸಬೇಡಿ ಎಂದು ಹೇಳಿದರು.