ಮೈಸೂರು: ಇದೇ ತಿಂಗಳ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದು, ಮೋದಿ ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇವಾಲಯವನ್ನು ಸ್ವಚ್ಛಗೊಳಿಸುವ ಮೂಲಕ ʼಸ್ವಚ್ಛತಾ ಅಭಿಯಾನʼಕ್ಕೆ ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ್ದ ಮೋದಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯುವ ಮುನ್ನ ದೇಶಾದ್ಯಂತ ದೇವಸ್ಥಾನಗಳ ಸ್ವಚ್ಛತೆ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು.
ಅದರಂತೆ ದೇಶದಾದ್ಯಂತ ವಿವಿಧೆಡೆ ಜನತೆ ದೇವಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಮೋದಿ ಕರೆಯನ್ನು ಪಾಲಿಸಿದರು. ಜನತೆ ಅಷ್ಟೇ ಅಲ್ಲದೇ ರಾಜಕಾರಣಿಗಳೂ ಸಹ ಈ ಕೆಲಸವನ್ನು ಮಾಡುತ್ತಿದ್ದು ಇದೀಗ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಸಹ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಾಪ್ ಸಿಂಹ ಆಲಯವನ್ನು ಸ್ವಚ್ಛಗೊಳಿಸಿದ್ದಾರೆ. ಈ ಕುರಿತ ಫೋಟೊಗಳನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರತಾಪ್ ಸಿಂಹ “ಜನವರಿ 22ರಂದು ಪ್ರಭು ಶ್ರೀರಾಮ ಬರುತ್ತಿದ್ದಾನೆ. ರಾಮನು ಬರುವ ಈ ಶುಭ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ದೇವಾಲಯಗಳು ಹಾಗೂ ಅದರ ಪರಿಸರವನ್ನು ಸ್ವಚ್ಚಗೊಳಿಸೋಣ. ಶ್ರೀರಾಮನನ್ನು ಸ್ವಾಗತಿಸೋಣ” ಎಂದು ಬರೆದುಕೊಂಡಿದ್ದಾರೆ.