ಮೈಸೂರು: ಸಂಕ್ರಾಂತಿಯ ಬಳಿಕ ರಾಜ್ಯ ರಾಜಕೀಯದಲ್ಲಿ ಚುನಾವಣೆ ಚಟುವಟಿಕೆ ಬಿರುಸುಗೊಂಡಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರೂ ರಾಜಕೀಯ ಪಕ್ಷಗಳು ಮೈಕೊಡವಿ ಎದ್ದು ನಿಂತಿವೆ. ಯಾತ್ರೆಗಳ ಪರ್ವ ಆರಂಭವಾಗಿದೆ. ಮೂರೂ ಪಕ್ಷಗಳು ಮತದಾರರ ಮನೆ ಬಾಗಿಲು ತಟ್ಟುವ ಕಾರ್ಯ ಆರಂಭಿಸಿವೆ. ಕಾಂಗ್ರೆಸ್ ‘ಪ್ರಜಾಧ್ವನಿ’ ಬಸ್ ಯಾತ್ರೆ ಮೂಲಕ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಸಿದ್ದರಾಮಮಯ್ಯ -75 ದಾವಣಗೆರೆ ಸಮಾವೇಶದ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿ, ಶಕ್ತಿಪ್ರದರ್ಶನ ಮಾಡಿತ್ತು. ನಂತರ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಮೂಲಕ ಸಂಚಲನ ಉಂಟುಮಾಡಿತ್ತು. ಆನಂತರ ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ, ಬೆಂಗಳೂರಿನಲ್ಲಿ ನಾ ನಾಯಕಿ ಸಮಾವೇಶ ನಡೆಸಿ ಮತ ಧ್ರುವೀಕರಣಕ್ಕೆ ಚಾಲನೆ ನೀಡಿತ್ತು. ಇದೀಗ ‘ಪ್ರಜಾಧ್ವನಿ’ ಯಾತ್ರೆ ಮೂಲಕ ರಾಜ್ಯದ 224 ಕ್ಷೇತ್ರಗಳನ್ನೂ ತಲುಪುವ ಕಾರ್ಯ ಮಾಡುತ್ತಿದೆ.
ಈಗಾಗಲೇ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ‘ಪ್ರಜಾಧ್ವನಿ’ ಯಾತ್ರೆ ಯಶಸ್ವಿಯಾಗಿದ್ದು, 26, 27ರಂದು ಹಳೇ ಮೈಸೂರು ಭಾಗವಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ. ಉಚಿತ ಕೊಡುಗೆಗಳನ್ನು ಘೋಷಿಸುತ್ತಿರುವ ಕಾಂಗ್ರೆಸ್ ಈಗಾಗಲೇ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನನಿಗೆ ಮಾಸಿಕ 2,000 ರೂ. ಪ್ರತಿ ಬಿಪಿಎಲ್ ಕುಟಂಬಕ್ಕೆ ತಲಾ 10 ಕೆ.ಜಿ.ಅಕ್ಕಿ ನೀಡುವುದಾಗಿ ಪ್ರಕಟಿಸಿದೆ.
ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಮುಂಭಾಗ ಇರುವ ಜೆ.ಕೆ.ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಚಾಮರಾಜನಗರದಲ್ಲಿ ಬೆಳಿಗ್ಗೆ 11 ಗಂಟೆಗೆ ಸಂತೆಮರಳ್ಳಿ ವೃತ್ತದ ಬಳಿ ಇರುವ ರೇಷ್ಮೆ ಕಾರ್ಖಾನೆ ಹತ್ತಿರದ ಮೈದಾನದಲ್ಲಿ ಆಯೋಜಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅವರ ಉಸ್ತುವಾರಿಯಲ್ಲಿ ಮೈಸೂರು, ಚಾಮರಾಜನಗರ ಸಮಾವೇಶ ಆಯೋನೆಗೊಂಡಿದ್ದು, ಈಗಾಗಲೇ ಪೂರ್ವಭಾವಿ ಸಭೆಗಳು ನಡೆದಿವೆ. ಇದು ಸಿದ್ದರಾಮಯ್ಯನವರ ತವರು ಜಿಲ್ಲೆ (ಅವಿಭಜಿತ ಮೈಸೂರು, ಚಾಮರಾಜನಗರ) ಯಾಗಿದ್ದು ಕಾಂಗ್ರೆಸ್ ಶಕ್ತಿಪ್ರದರ್ಶನದ ವೇದಿಕೆ ಆಗಲಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನಸಭೆಯ ವಿರೋದಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಳೆ ಮೊಳಗಲಿದೆ ಪ್ರಜಾಧ್ವನಿ : ಚಾ.ನಗರ, ಮೈಸೂರಿನಲ್ಲಿ ಕೈ ಸಮಾವೇಶ
