Mysore
29
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಮದ್ದೂರಿನಲ್ಲಿ ಕಾಡು ಹಂದಿ ಹಾವಳಿ ವಿರುದ್ಧ ಬೀದಿಗಿಳಿದ ಜನತೆ

ಮದ್ದೂರು: ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆಗಳ ಜತೆ ಕಾಡು ಹಂದಿ ಮತ್ತು ಮುಳ್ಳು ಹಂದಿಗಳ ಹಾವಳಿಯೂ ಹೆಚ್ಚಾಗಿದ್ದು ಬೇಸತ್ತ ರೈತರು ಇಂದು (ನವೆಂಬರ್‌ 29) ಮದ್ದೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ರೈತರು ಮತ್ತು ಜಿಲ್ಲೆಯ ನಾನಾ ಪ್ರಗತಿಪರ ಸಂಘಟನೆಗಳ ಸದಸ್ಯರು ಬೃಹತ್‌ ಸಂಖ್ಯೆಯಲ್ಲಿ ಸೇರಿ ಮಂಗಳವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಈ ವೇಳೆ ಮಾತನಾಡಿದ ಮುಖಂಡರು ಮುಳ್ಳು ಹಂದಿ ಹಾಗೂ ಕಾಡು ಹಂದಿಗಳ ಹಾವಳಿಯಿಂದಾಗಿ ರೈತರು ಅನೇಕ ರೀತಿಯಲ್ಲಿ ಕಷ್ಟ ನಷ್ಟಗಳಿಗೆ ಸಿಲುಕಿದ್ದಾರೆ. ಜಮೀನುಗಳಲ್ಲಿ ಹಾಕಿರುವ ತೆಂಗಿನ ಸಸಿಗಳನ್ನೂ ಕಾಡು ಹಂದಿಗಳು ಕಿತ್ತುಹಾಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕಾಡು ಹಂದಿಗಳ ಹಾವಳಿ ಮಿತಿ ಮೀರಿದೆ. ಇವುಗಳ ಉಪಟಳದಿಂದ ಯಾವುದೇ ಬೆಳೆ ಬೆಳೆಯಲು ಕಷ್ಟವಾಗಿದೆ. ಹಂದಿಗಳ ಹಾವಳಿ ತಡೆಗೆ ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆಗಳು ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಾಲ್ಲೂಕು ಆಡಳಿತದ ವಿರುದ್ದ ಘೋಷಣೆ ಕೂಗಿದರು.

ಹಂದಿಗಳ ಹಾವಳಿಯಿಂದ ತೊಂದರೆಗೊಳಗಾದ ರೈತರಿಗೆ ಪರಿಹಾರ ನೀಡಬೇಕು, ಹಾವಳಿ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತೆಂಗುಬೆಳೆಗಾರರ ಸಂಘ, ರಾಜ್ಯ ರೈತಸಂಘ, ಗ್ರಾಪಂ ಸದಸ್ಯರ ಒಕ್ಕೂಟ, ಹಾಲು ಉತ್ಪಾದಕರ ಹೋರಾಟ ಸಮಿತಿ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳು ಭಾಗವಹಿಸಿದ್ದವು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯ ನಿರ್ವಾಹಕ ಸಂಚಾಲಕ ಶ್ರೀಕ ಶ್ರೀನಿವಾಸ್‌, ರೈತ ಮುಖಂಡರಾದ ನ.ಲಿ.ಕೃಷ್ಣ, ಚನ್ನಸಂದ್ರ ಲಕ್ಷ್ಮಣ್, ಸೋ.ಸಿ. ಪ್ರಕಾಶ್‌, ಕರವೇ ಅಶೋಕ್ ಕುಮಾರ್, ಶಿವಪ್ಪ, ರಾಜು, ಬೋರಯ್ಯ, ರಮೇಶ್, ಇಂದ್ರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಭಾಗಿಯಾಗಿದ್ದರು.

ಸ್ಥಳೀಯ ನಿವಾಸಿಗಳ ಮೇಲೂ ದಾಳಿ

ಬೆಳೆ ನಷ್ಟ ಒಂದೆಡೆಯಾದರೆ ಮದ್ದೂರು ಪಟ್ಟಣದಲ್ಲಿ ಮುಳ್ಳು ಹಂದಿಗಳು ಸ್ಥಳಿಯ ನಿವಾಸಿಗಳ ಮೇಲೂ ದಾಳಿ ಮಾಡಿ ಗಾಯಗೊಳಿಸಿವೆ. ರಾತ್ರೋ ರಾತ್ರಿ ಸ್ಥಳೀಯ ನಿವಾಸಿಗಳ ಮೇಲೆ ಮುಳ್ಳುಹಂದಿಗಳು ದಾಳಿ ಮಾಡುತ್ತಿದ್ದು ಚಿರತೆ ಜತೆ ಈಗ ಮುಳ್ಳು ಹಂದಿಗಳಿಗೂ ಹೆದರಬೇಕಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!