ಗುಂಡ್ಲುಪೇಟೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸಿಲ್ದಾರ್ ಮಾಹಿತಿ
ಗುಂಡ್ಲುಪೇಟೆ : ನ.೧೪ ಮತ್ತು ೧೫ರಂದು ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಶ್ರೀ ಪಾರ್ವತಾಂಬ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾಲ್ಲೂಕು ತಹಸಿಲ್ದಾರ್ ಕೊಠಡಿಯಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಸಿ.ಜಿ ರವಿಶಂಕರ್‌ರವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಮಾತನಾಡಿದ ತಹಸಿಲ್ದಾರ್ ರವಿಶಂಕರ್, ಈ ಬಾರಿ ನಡೆಯಲಿರುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜಾನುವಾರುಗಳಿಗೆ ಮತ್ತು ಎತ್ತಿನ ಗಾಡಿಗಳಿಗೆ ನಿಷೇಧ ಹೇರಲಾಗಿದೆ. ರಾಜ್ಯ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುವಿಕೆ ಇರುವ ಕಾರಣ ಜಾನುವಾರುಗಳಿಗೆ ನಿಷೇಧ ಹೇರಲಾಗಿದೆ. ಆರೋಗ್ಯಕರ ಜಾನುವಾರುಗಳು ಜಾತ್ರೆಯ ಸಂದರ್ಭದಲ್ಲಿ ಒಂದೇ ಸ್ಥಳದಲ್ಲಿ ಒಟ್ಟುಗೂಡಿದ ಸಂದರ್ಭದಲ್ಲಿ ರೋಗ ಇಲ್ಲದ ಜಾನುವಾರುಗಳಿಗೂ ರೋಗ ಹರಡುವಿಕೆ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಜಾನುವಾರುಗಳಿಗೆ ಜಾತ್ರೆ ಸಂದರ್ಭದಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ರಥೋತ್ಸವ ಇರುವ ಹಿನ್ನೆಲೆಯಲ್ಲಿ ತೇರನ್ನು ಎಳೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೇರಿನ ಚಕ್ರವನ್ನು ಹಾಗೂ ತೇರನ್ನು ಪರೀಕ್ಷಿಸಿ ಜಾತ್ರಾ ಮಹೋತ್ಸವವನ್ನು ನಡೆಸಬೇಕೆಂದು ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಕೆಎಸ್‌ಆರ್‌ಟಿಸಿ ಗುಂಡ್ಲುಪೇಟೆ ಘಟಕದ ವತಿಯಿಂದ ಜಾತ್ರಾ ಸಂದರ್ಭದಲ್ಲಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದ ಅವರು, ಸ್ಥಳದಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿ ಜಾತ್ರಾ ಸಂದರ್ಭದಲ್ಲಿ ಕೆಲಸ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಪಾರ್ವತಮ್ಮ ಜಾತ್ರಾ ಸಮಿತಿಯ ಅಧ್ಯಕ್ಷರಾದ ಶಿವಕುಮಾರ, ಖಜಾಂಚಿ ಮಹೇಶ್, ಕಾರ್ಯದರ್ಶಿ ಅಶೋಕ್, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.





