ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮಣ ದೊಡ್ಡಿ ಗ್ರಾಮದಲ್ಲಿ ಕರುಪ್ಪಸ್ವಾಮಿ ನೂತನ ದೇವಾಲಯ ನಿರ್ಮಾಣಕ್ಕೆ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಸಂಚಾಲಕ ಜನಧ್ವನಿ ಬಿ.ವೆಂಕಟೇಶ್ ಇಂದು ಭೂಮಿಪೂಜೆ ನೆರವೇರಿಸಿದರು.
ಗ್ರಾಮದ ಸ್ಥಳಿಯ ಧಾರ್ಮಿಕ ಸಂಪ್ರದಾಯದಂತೆ ಸಸಿಗೆ ಆರತಿ ಬೆಳಗಿ ಪೂಜೆ ನೆರವೇರಿಸಿ ಹಾಲೆರೆದರು. ಈ ವೇಳೆ ಮಾತನಾಡಿದ ಬಿ. ವೆಂಕಟೇಶ್ ಅವರು ದೇವಾಲಯಗಳು ಜನತೆಯ ಶ್ರದ್ಧಾ ಭಕ್ತಿ ಜೊತೆಗೆ ಮನಶಾಂತಿಗೆ ಪೂರಕವಾದ ಕೇಂದ್ರಗಳಾಗಿವೆ. ಈ ದಿಸೆಯಲ್ಲಿ ಲಕ್ಷ್ಮಣ ದೊಡ್ಡಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಕರುಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವುದು ಸಂತಸ ತಂದಿದೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಲಿ ಎಂದು ಆಶೀಸಿದ ಅವರು ಕರುಪ್ಪಸ್ವಾಮಿ ದೇವರು ಜನತೆಗೆ ಸುಖ ಶಾಂತಿಯನ್ನು ಕರುಣಿಸಲಿ. ಗ್ರಾಮದ ಜನತೆಯ ಯಾವುದೇ ದುಃಖ ದುಮ್ಮಾನಗಳಿಗೆ ಎಂದಿಗೂ ನಾನು ಜೊತೆಯಾಗಿರುತ್ತೇನೆ ಎಂದು ಭರವಸೆ ನೀಡಿದರು.
ಆರತಿ ಎತ್ತಿ ಸ್ವಾಗತಿಸಿದ ಮಹಿಳೆಯರು: ಕರುಪ್ಪಸ್ವಾಮಿ ನೂತನ ದೇವಾಲಯ ನಿರ್ಮಾಣದ ಭೂಮಿ ಪೂಜೆಗೆ ಆಗಮಿಸಿದ ಬಿ. ವೆಂಕಟೇಶ್ ಅವರನ್ನು ಗ್ರಾಮದ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು. ಗ್ರಾಮದ ಮುಖಂಡರುಗಳು ಶಾಲು ಹೂವಿನಹಾರ ಹಾಕಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳು, ಮುಖಂಡರುಗಳು, ಯುವಕರು, ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.





