ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ ಎಂಬ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಸದ್ಯ ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಯೋರ್ವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೊಡಗು ಜಿಲ್ಲೆಯ ಖ್ಯಾತ ಪೇಜ್ ʼಕೊಡಗು ಕನೆಕ್ಟ್ʼ ಬರೆದುಕೊಂಡಿದ್ದು, ಮಡಿಕೇರಿಯಲ್ಲಿ ಹೃದಯಸ್ತಂಭನಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇರುವ ಆಸ್ಪತ್ರೆ ಇದ್ದರೆ ಅವರು ಬದುಕುಳಿಯುತ್ತಿದ್ದರು ಎಂದು ಉಲ್ಲೇಖಿಸಿದೆ.

“46 ವರ್ಷದ ಮೂರ್ನಾಡು ಮೂಲದ ವ್ಯಕ್ತಿಗೆ ತಡರಾತ್ರಿ 2 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಮಡಿಕೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ 5 ಗಂಟೆಗೆ ಮೃತಪಟ್ಟಿದ್ದಾರೆ. ಕೊಡಗಿನಲ್ಲಿ ಹೃದಯಸ್ತಂಭನಕ್ಕೊಳಗಾದವರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಆಸ್ಪತ್ರೆ ಇದ್ದಿದ್ದರೆ ಆತ ಬದುಕುಳಿಯುತ್ತಿದ್ದ. ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬುದು ಕನಸಾಗಿಯೇ ಉಳಿದಿದೆ” ಎಂದು ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್‌ಗೆ ಸ್ಪಂದಿಸಿರುವ ನೆಟ್ಟಿಗರು ಕೊಡಗಿನಂತಹ ಪ್ರವಾಸಿ ತಾಣಗಳಿರುವ ಜಿಲ್ಲೆಯಲ್ಲಿ ಒಳ್ಳೆಯ ಆಸ್ಪತ್ರೆ ಇಲ್ಲದಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ, ಕಿಡಿಕಾರಿದ್ದಾರೆ ಹಾಗೂ ಸಂಬಂಧಪಟ್ಟ ರಾಜಕೀಯ ವ್ಯಕ್ತಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.





