ಕಾಡಾನೆಯೊಂದರ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ದಸರಾ ಆನೆ ಅರ್ಜುನನ ಕುರಿತು ಇದೀಗ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅರ್ಜುನನ ಮಾವುತ ವಿನು ಕಾಡಾನೆಗೆ ಗುಂಡು ಹಾರಿಸುವ ಬದಲು ಅರ್ಜುನನಿಗೆ ಗುಂಡು ಹಾರಿಸಿದರು ಎಂದು ಆರೋಪಿಸಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರು ಹಾಕಿದ್ದು ಅರ್ಜುನನ ಸಾವಿನ ಕುರಿತು ಸಾಕಷ್ಟು ಅನುಮಾನಗಳು ಉಂಟಾಗುವ ಹಾಗೆ ಮಾಡಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅರ್ಜುನನ ಅಂತ್ಯಕ್ರಿಯೆಯ ಬಗ್ಗೆ ಪೋಸ್ಟ್ ಒಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳವರೆಗೆ ಹಲವು ಪ್ರಶ್ನೆಗಳನ್ನು ಹಾಕಲಾಗಿದೆ.
ವೈರಲ್ ಆಗಿರುವ ಪೋಸ್ಟ್‌ನಲ್ಲಿ ಏನಿದೆ?
ಈ ವೈರಲ್ ಪೋಸ್ಟ್‌ನಲ್ಲಿ “ಅರ್ಜುನ ಸತ್ತಾಗ ಯಾರಿಗೂ ಬೇಡ ದಸರಾ ಸಮಯದಲ್ಲಿ ಮಾತ್ರ ಬೇಕಾ ನಿಮಗೆ?” ಎಂಬ ಹೆಡ್‌ಲೈನ್ ಒಂದನ್ನು ಬರೆಯಲಾಗಿದ್ದು ಪ್ರಶ್ನೆಗಳು ಈ ಕೆಳಕಂಡಂತಿವೆ..
1. ಮೈಸೂರು ರಾಜರು ಯಾಕೆ ಬರಲಿಲ್ಲ?
2. ಮುಖ್ಯಮಂತ್ರಿಗಳು ಯಾಕೆ ಬರಲಿಲ್ಲ?
3. ಉಪಮುಖ್ಯಮಂತ್ರಿ ಯಾಕೆ ಬರಲಿಲ್ಲ?
4. ರಾಜಕಾರಣಿಗಳು ಯಾಕೆ ಬರಲಿಲ್ಲ?
5. ಮೈಸೂರಿನಲ್ಲಿ ಅಂತ್ಯಕ್ರಿಯೆ ಯಾಕೆ ಮಾಡಲಿಲ್ಲ?
6. ತರಾತುರಿಯಲ್ಲಿ ಯಾಕೆ ಅಂತ್ಯಕ್ರಿಯೆ ಮಾಡಿದರು?
7. ಅರ್ಜುನನ ಸಾವಿನ ಸಂದರ್ಭದ ವಿಡಿಯೊಗಳನ್ನು ಯಾಕೆ ಹಂಚಿಕೊಂಡಿಲ್ಲ?
8. ದಂತ ಕತ್ತರಿಸುವ ಅಗತ್ಯವೇನಿತ್ತು?
9. ಆನೆಗಳಿಗೆ 60 ವರ್ಷ ವಯಸ್ಸಾದರೆ ವಿಶ್ರಾಂತಿ ನೀಡಬೇಕು, ಅರ್ಜುನನಿಗೆ 64 ವರ್ಷ ವಯಸ್ಸಾದರೂ ಈ ಬೇಟೆ ಬೇಕಿತ್ತಾ?
ಈ ಪೋಸ್ಟ್ ಅನ್ನು ಹಲವಾರು ಮಂದಿ ಹಂಚಿಕೊಂಡಿದ್ದು ಸಂಬಂಧಪಟ್ಟವರು ಇದಕ್ಕೆ ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.