ಮಂಡ್ಯ: ನಗರದ ಪಿಇಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಇಟಿ ಐಟಿಎಫ್ ಮಂಡ್ಯ ಓಪನ್ ಅಂತಾರಾಷ್ಟ್ರೀಯ ಪುರುಷರ ಟೆನಿಸ್ ಟೂರ್ನಿಯಲ್ಲಿ ಮೈಸೂರಿನ ಮನೀಷ್ ಗಣೇಶ್ ಫ್ರೀ-ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಚಂಡೀಘಡ್‌ನ ನೀರಜ್ ಯಶ್‌ಪೌಲ್‌ರನ್ನು 6-1, 6-1 ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿ ಪ್ರೀ-ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡರು. ಮೈಸೂರು ಹುಡುಗನ ಈ ಗೆಲುವು ಟೆನಿಸ್ ಪ್ರೇಮಿಗಳನ್ನು ಪುಳಕಗೊಳಿಸಿದೆ.
23 ವರ್ಷದ ನೀರಜ್ ಮೊದಲ ಸೆಟ್‌ನ ಆಟದಲ್ಲೇ ಸರ್ವಿಸ್ ಉಳಿಸಿಕೊಳ್ಳಲು ಹೆಣಗಾಡಿದರು. ಇನ್ನೊಂದೆಡೆ ಸ್ಥಳೀಯರ ಬೆಂಬಲ, ಹರ್ಷೋದ್ಗಾರಗಳ ನಡುವೆ ಆಟವಾರಂಭಿಸಿದ ಮನೀಷ್ ಬಿರುಸಿನ ಹಾಗೂ ಅಷ್ಟೇ ಎಚ್ಚರಿಕೆಯ ಆಟವಾಡಿದರು. ಉತ್ಕೃಷ್ಟ ಸರ್ವಿಸ್ ಪ್ರದರ್ಶಿಸಿದ 22 ವರ್ಷದ ಮನೀಷ್ ಪರಿಣಾಮಕಾರಿ ಹೊಡೆತಗಳಿಂದ ಎದುರಾಳಿಯ ರಕ್ಷಣೆ ಬೇಧಿಸಿದರು.
ನೀರಜ್‌ಗೆ ಒಂದಿಷ್ಟೂ ಅವಕಾಶ ನೀಡದ ಮನೀಷ್ ಮೊದಲ ಸೆಟ್‌ನ್ನು 6-1 ಅಂತರದಲ್ಲಿ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನ ಮೊದಲ ಆಟದಲ್ಲಿ ತಮ್ಮ ಸರ್ವಿಸ್ ಉಳಿಸಿಕೊಂಡ ಮನೀಷ್, ಎರಡನೇಯದರಲ್ಲಿ ಎದುರಾಳಿಯ ಸರ್ವಿಸ್ ಮುರಿದು 2-0 ಲೀಡ್‌ಗೆ ಮುನ್ನುಗ್ಗಿದರಾದರೂ ಮೂರನೇ ಸೆಟ್‌ನ ಆಟದಲ್ಲಿಯೇ ತಮ್ಮ ಸರ್ವಿಸ್ ಕಳೆದುಕೊಂಡರು. ಆದರೆ, ಮುಂದಿನ ನಾಲ್ಕೂ ಆಟಗಳನ್ನು ಜಯಿಸಿದ ಮನೀಷ್ 67 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಮತ್ತೊಂದು ಪಂದ್ಯದಲ್ಲಿ ಉತ್ತರ ಪ್ರದೇಶದ ಸಿದ್ಧಾರ್ಥ ವಿಶ್ವಕರ್ಮ ಅವರು 6-3, 6-1 ನೇರ ಸೆಟ್‌ಗಳಿಂದ ಆದಿಲ್ ಕಲ್ಯಾಣಪುರ ಅವರನ್ನು ಪರಾಭವಗೊಳಿಸಿ ಅಂತಿಮ ಹದಿನಾರರ ಸುತ್ತು ಪ್ರವೇಶಿಸಿದರು.
ನಿರಾಸೆಗೊಂಡ ಪ್ರಜ್ವಲ್‌ದೇವ್
ಭಾರತ ಟೆನಿಸ್ ತಂಡಕ್ಕೆ ಸೇರ್ಪಡೆಯಾಗಿ ಸುದ್ದಿಯಲ್ಲಿರುವ ಮೈಸೂರಿನ ಮತ್ತೊಬ್ಬ ಆಟಗಾರ ಎಸ್.ಡಿ.ಪ್ರಜ್ವಲ್‌ದೇವ್ ಮಂಗಳವಾರದ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿರಾಸೆಗೊಂಡರು. ಭಾರತದವರೇ ಆದ ನಿತಿನ್ ಕುಮಾರ ಸಿನ್ಹಾ ಅವರೊಂದಿಗೆ ಪುರುಷರ ಡಬಲ್ಸ್‌ನ ಮೊದಲ ಪಂದ್ಯವನ್ನಾಡಿದ ಪ್ರಜ್ವಲ್‌ದೇವ್, ಕೊರಿಯಾದ ವೊಬಿನ್ ಶಿನ್ ಹಾಗೂ ಭಾರತದ ಕರಣಸಿಂಗ್ ಜೋಡಿಯೆದುರು ಮೊದಲ ಸೆಟ್ಟಿನಲ್ಲಿ 5-4 ಆಟಗಳಿಂದ ಮುಂದಿದ್ದರು. ಅದೇ ಸಂದರ್ಭದಲ್ಲಿ ನಿತಿನ್ ಕುಮಾರ ಸಿನ್ಹಾ ಹೊಟ್ಟೆನೋವಿನಿಂದ ಬಳಲಿದ್ದರಿಂದ ಎದುರಾಳಿಗಳಿಗೆ ಪಂದ್ಯ ಬಿಟ್ಟು ಕೊಡಬೇಕಾಯಿತು.
ಪುರುಷರ ಸಿಂಗಲ್ಸ್‌ನಲ್ಲಿ 8ನೇ ಸೀಡ್ ಪಡೆದಿರುವ ಪ್ರಜ್ವಲ್ ಬುಧವಾರ ತಮ್ಮ ಮೊದಲ ಸುತ್ತಿನಲ್ಲಿ ಕೊರಿಯಾದ ಯನ್‌ಸೆಯೊಕ್ ಜಂಗ್ ಅವರನ್ನು ಎದುರಿಸಲಿದ್ದಾರೆ.