Mysore
27
broken clouds
Light
Dark

ಮೈಸೂರು : ಕಾಂಗ್ರೆಸ್-ಜಾ.ದಳದ ಬಲಿಷ್ಠತೆ ಮುಂದೆ ಮಂಕಾದ ಬಿಜೆಪಿ

ಮೋದಿ, ಬಿಎಸ್‌ವೈ ನಾಮಬಲವೇ ಬಿಜೆಪಿಗೆ ರಕ್ಷೆ; ಮತ ತಂದುಕೊಡಬಲ್ಲ ಸ್ಥಳೀಯ ನಾಯಕರ ಕೊರತೆ

ಕೆ.ಬಿ.ರಮೇಶ ನಾಯಕ
ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಣಿಸಲು ಜಾ.ದಳಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದ ಬಿಜೆಪಿಯು ಈ ಬಾರಿ ಮೈಸೂರು ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್-ಜಾ.ದಳದ ಬಲಿಷ್ಠತೆ ಎದುರು ಮಂಕಾಗಿ ಹೋಗಿದ್ದು, ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿಯತ್ತ ಸೆಳೆದು ಬಲವಾಗುವ ನಿರೀಕ್ಷೆ ಹೊಂದಿದ್ದ ನಾಯಕರಿಗೆ ದೊಡ್ಡ ಶಾಕ್ ಉಂಟಾಗಿದೆ.
ಜಿಲ್ಲೆಯ ಪ್ರಭಾವಿ ನಾಯಕ ಜಿ.ಟಿ.ದೇವೇಗೌಡರು ಬಿಜೆಪಿ ಸೇರುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡು ಪಕ್ಷ ಸಂಘಟನೆಯ ಕಡೆಗೆ ಗಮನಿಸದೆ ಕೈ ಚೆಲ್ಲಿ ಕುಳಿತಿದ್ದ ನಾಯಕರಿಗೆ ಚುನಾವಣೆಯ ಹೊಸ್ತಿಲಲ್ಲಿ ದೊಡ್ಡ ಸವಾಲು ಎದುರಾಗಿದ್ದು, ಅಭ್ಯರ್ಥಿಗಳಿಗೆ ಮತವನ್ನು ತಂದುಕೊಡಬಲ್ಲ ಸ್ಥಳೀಯ ನಾಯಕರ ಕೊರತೆ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಮಬಲದ ರಕ್ಷೆ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಇಂತಹದ್ದೇ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುತ್ತೇನೆಂಬ ಸಾಮರ್ಥ್ಯವನ್ನು ಹೊಂದಿಲ್ಲದಿರುವುದು ಮುಖಂಡರಲ್ಲಿ ಆತಂಕ ಮೂಡಿಸಿದೆ.
ಹಳೇ ಮೈಸೂರು ಪ್ರಾಂತ್ಯ ಕಾಂಗ್ರೆಸ್ ಮತ್ತು ಜಾ.ದಳದ ಭದ್ರಕೋಟೆಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ನೆಲೆಯೂರಲು ಬಿಜೆಪಿ ಇನ್ನೂ ಬೆವರಿಳಿಸುತ್ತಲೇ ಇದೆ. ಆದರೆ, ರಾಜಕಾರಣದಲ್ಲಿ ಉಂಟಾದ ಅನಿರೀಕ್ಷಿತ ಬೆಳವಣಿಗೆಯ ಲಾಭವನ್ನು ಪಡೆಯುತ್ತಿದ್ದ ಬಿಜೆಪಿಯು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಪರೋಕ್ಷವಾಗಿ ಜಾ.ದಳಕ್ಕೆ ಅನುಕೂಲಕರವಾದ ನಿಲುವು ಕೈಗೊಳ್ಳುತ್ತಿತ್ತು. ಇದರ ಫಲವಾಗಿಯೇ ೨೦೧೮ರ ಚುನಾವಣೆಯಲ್ಲಿ ಚಾಮುಂಡೇಶ್ವರಿ, ಕೆ.ಆರ್.ನಗರ, ಪಿರಿಯಾಪಟ್ಟಣ, ತಿ.ನರಸೀಪುರ ಕ್ಷೇತ್ರದಲ್ಲಿ ದುರ್ಬಲರಿಗೆ ಟಿಕೆಟ್ ಕೊಡುತ್ತಿತ್ತು. ಇದರಿಂದಾಗಿ ಜಾತಿ ಸಮೀಕರಣದ ಆಧಾರದ ಮೇಲೆ ಜಾ.ದಳ ಗೆದ್ದು, ಕಾಂಗ್ರೆಸ್ ಸೋಲು ಕಾಣುತ್ತಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಜಾ.ದಳ ಬಲಿಷ್ಠವಾಗುತ್ತಿದ್ದು, ಬಿಜೆಪಿ ಜತೆಗೆ ಅಂತರ ಕಾಯ್ದುಕೊಳ್ಳಲು ಮುಂದಾಗಿರುವ ದಳಪತಿಗಳು ಹಲವು ದೃಢ ನಿರ್ಧಾರ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್-ಬಿಜೆಪಿ ಸೇರುವ ತವಕದಲ್ಲಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡರು ದೊಡ್ಡದೇವೇಗೌಡರ ಭಾವನಾತ್ಮಕ ನಡೆಗೆ ಮಾರು ಹೋಗಿ ಜಾ.ದಳದಲ್ಲಿ ಮುಂದುವರಿಯುವ ತೀರ್ಮಾನ ಮಾಡುತ್ತಿದ್ದಂತೆ ಬಿಜೆಪಿ ಇಟ್ಟಿದ್ದ ಲೆಕ್ಕಾಚಾರ ತಲೆಕೆಳಗಾಗಿದೆ.
ಸ್ಥಳೀಯ ನಾಯಕರ ಕೊರತೆ: ೨೦೧೮ರ ಚುನಾವಣೆಯಲ್ಲಿ ಅನುಸರಿಸಿದ್ದ ಫಾರ್ಮುಲಾವನ್ನೇ ೨೦೨೩ರ ಚುನಾವಣೆಯಲ್ಲಿ ಬಳಸಲಾಗದು. ಪ್ರಧಾನಿ ಮೋದಿ, ಬಿಎಸ್‌ವೈ ನಾಮಬಲ ಈ ಬಾರಿ ಮೈಸೂರು ಪ್ರಾಂತ್ಯದ ಮಟ್ಟಿಗೆ ಜಾಸ್ತಿ ಕೆಲಸ ಮಾಡುವ ಸಾಧ್ಯತೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಾಧ್ಯವಾಗದಿದ್ದರೆ, ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದಿಂದ ಕಣಕ್ಕಿಳಿಯದಿರುವುದರಿಂದ ವೀರಶೈವ ಮತದಾರರು ಸಂಪೂರ್ಣವಾಗಿ ಬಿಜೆಪಿ ಪರವಾಗಿ ನಿಲ್ಲುವುದು ಅನುಮಾನವಾಗಿದೆ. ಸಚಿವ ಸಂಪುಟದಿಂದ ಕೈಬಿಟ್ಟಿದ್ದನ್ನೇ ಅಸ್ತ್ರ ಮಾಡಿಕೊಂಡು, ದಲಿತ ವರ್ಗಕ್ಕೆ ಡಿಸಿಎಂ ಸ್ಥಾನ ತಪ್ಪಿಸಿದ್ದಾರೆಂಬ ವಿಚಾರ ಮುಂದಿಟ್ಟುಕೊಂಡು ದಲಿತ ವರ್ಗದ ಮತಗಳನ್ನು ಕಾಂಗ್ರೆಸ್ ವಿರುದ್ಧವಾಗಿ ಹಾಕುವಂತೆ ಮಾಡಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ಪ್ರಭಾವ ಈ ಬಾರಿ ನಡೆಯಲ್ಲ. ನಡೆದರೂ ಅದು ಅಳಿಯ ಸ್ಪರ್ಧಿಸುವ ನಂಜನಗೂಡು ಕ್ಷೇತ್ರದಲ್ಲಿ ಮಾತ್ರವಾಗಿದೆ.
ಇನ್ನು ದಲಿತ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರೇ ಎಐಸಿಸಿ ಅಧ್ಯಕ್ಷರಾಗಿರುವ ಕಾರಣ ದಲಿತರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಉಳಿದಂತೆ, ಶಾಸಕ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರು ತಂತಮ್ಮ ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಹರಸಾಹಸಪಡಬೇಕಿದೆಯೇ ಹೊರತು ಮತ್ತೊಂದು ಕ್ಷೇತ್ರದಲ್ಲಿ ಪ್ರಭಾವ ಹೊಂದಿಲ್ಲ. ಸಂಸದ ಪ್ರತಾಪ್ ಸಿಂಹ ಅವರು ಮೋದಿ ಅಲೆಯಿಂದಾಗಿ ಎರಡನೇ ಬಾರಿ ಗೆದ್ದರೂ ಒಕ್ಕಲಿಗರ ಮತಗಳನ್ನು ಸೆಳೆಯುವಷ್ಟು ಸಾಮರ್ಥ್ಯ, ಹಿಡಿತ ಸಾಧಿಸಿಲ್ಲ. ಜಾ.ದಳ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಂಸದರು ಈ ಬಾರಿ ಅನಿವಾರ್ಯವಾಗಿ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕಾಗಿದೆ. ಮತ್ತೊಂದೆಡೆ ಚಾಮುಂಡೇಶ್ವರಿ, ನಂಜನಗೂಡು, ತಿ.ನರಸೀಪುರ, ಹುಣಸೂರು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಾಯಕ ಸಮಾಜದ ಮತಗಳು ಬಿಜೆಪಿಗೆ ಈ ಬಾರಿ ಬೀಳುವಂತೆ ಮಾಡಲು ಶ್ರೀರಾಮುಲು ಅವರನ್ನು ಪ್ರಚಾರಕ್ಕೆ ಕರೆತಂದರೂ ವರ್ಕ್‌ಔಟ್ ಆಗುವ ಸಾಧ್ಯತೆ ತೀರಾ ಕಡಿಮೆಯಾಗಿದೆ.


ಸಮರ್ಥ ಅಭ್ಯರ್ಥಿಗಳಿಗಾಗಿ ಶೋಧ
ಮೈಸೂರು: ಜಾ.ದಳಕ್ಕೆ ಅನುಕೂಲವಾಗುವಂತೆ ನೋಡಿಕೊಂಡಿದ್ದ ಬಿಜೆಪಿ ನಾಯಕರ ನಡೆಯಿಂದಾಗಿ ಈ ಬಾರಿ ಅಭ್ಯರ್ಥಿಗಳಿಗಾಗಿ ಶೋಧ ನಡೆಸಬೇಕಾಗಿದೆ. ಜಿ.ಟಿ.ದೇವೇಗೌಡರ ವಿರುದ್ಧ ಪ್ರಬಲ ಅಭ್ಯರ್ಥಿ ಸಿಕ್ಕಿಲ್ಲ. ಹುಣಸೂರು, ಕೆ.ಆರ್.ನಗರದಲ್ಲಿ ಕಣಕ್ಕೆ ಇಳಿಯುತ್ತೇನೆಂದು ಕೆಲವು ಅಕಾಂಕ್ಷಿಗಳು ಹೇಳಿದರೂ ಕ್ಷೇತ್ರದಲ್ಲಿ ಓಡಾಡುವುದಕ್ಕೆ ಧೈರ್ಯ ತೋರುತ್ತಿಲ್ಲ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕಣಕ್ಕಿಳಿಯಲು ಒಲವು ತೋರಿದರೂ ಸಂಘಟನೆಗೆ ಧುಮುಕಿಲ್ಲದಿರುವ ಕಾರಣ ಕಾರ್ಯಕರ್ತರಲ್ಲಿ ನಿರಾಸಕ್ತಿ ಮೂಡಿಸಿದೆ. ತಿ.ನರಸೀಪುರದಲ್ಲಿ ಮಾಜಿ ಶಾಸಕ ಭಾರತೀಶಂಕರ್, ಎಚ್.ಡಿ.ಕೋಟೆ ಕ್ಷೇತ್ರದಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಆಕಾಂಕ್ಷಿಯಾಗಿದ್ದರೂ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಾಗಿ, ಗ್ರಾಮಾಂತರದಲ್ಲಿ ಸಂಘಟನೆ ಕೊರತೆ ಎದುರಿಸುತ್ತಿರುವ ಬಿಜೆಪಿ ಚುನಾವಣೆ ಹೊಸ್ತಿಲಲ್ಲಿ ಯಾವ ಪ್ರಯೋಗಗಳನ್ನು ಬಳಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ