ಮೈಸೂರು: ಕ್ರಿಕೆಟ್ ಆಡಲು ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಿವ್ಯಾ ಕುಮಾರ್ ಎಂಬಾತನೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ. ಕಳೆದ ಫೆಬ್ರವರಿ.24ರಂದು ಬೀಚನಹಳ್ಳಿಯಲ್ಲಿ ನೇರಳೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.
ಫೈನಲ್ ಪಂದ್ಯದಲ್ಲಿ ದಿವ್ಯಾ ಕುಮಾರ್ ಸಿಕ್ಸ್ ಹೊಡೆದು ತಮ್ಮ ತಂಡವನ್ನು ಗೆಲ್ಲಿಸಿದ್ದನು. ಗೆದ್ದ ಬಳಿಕ ಪಾರ್ಟಿ ಕೂಡ ಮಾಡಲಾಗಿತ್ತು. ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ದಿವ್ಯಾ ಕುಮಾರ್ ನಡು ರಸ್ತೆಯಲ್ಲೇ ಬಿದ್ದಿದ್ದನು. ಈ ವೇಳೆ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.
ಕಳೆದ 9 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿವ್ಯಾ ಕುಮಾರ್ ನಿನ್ನೆ ಸಾವನ್ನಪ್ಪಿದ್ದು, ಸಾವಿನ ಸುತ್ತ ಅನುಮಾನ ಹುತ್ತ ಹುಟ್ಟಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಕುಟುಂಬ ಸದಸ್ಯರು, ಮೊದಲು ದಿವ್ಯಾಕುಮಾರ್‌ಗೆ ಅಪಘಾತವಾಗಿದೆ ಅಂದುಕೊಂಡಿದ್ದೆವು. ಆದರೆ ಅವನ ಬೈಕ್‌ಗೆ ಏನೂ ಡ್ಯಾಮೇಜ್ ಆಗಿಲ್ಲ. ಯಾರೋ ಅವನನ್ನು ಕೊಲೆ ಮಾಡಿದ್ದಾರೆ. ಹೀಗಾಗಿ ದಿವ್ಯಾ ಕುಮಾರ್ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.





