ಮೈಸೂರು: ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ಯೋಗ ಧನುಷ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಲಲಿತ ಮಹಲ್ ಅರಮನೆ ಮುಂಭಾಗ ಏರ್ಪಡಿಸಿದ್ದ ಯೋಗ ಧನುಷ್ ಕಾರ್ಯಕ್ರಮಕ್ಕೆ ನೂರಾರು ಯೋಗಪಟುಗಳು ಯೋಗಾಸನ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಪೂರ್ವಭಾವಿಯಾಗಿ ಯೋಗ ಧನುಷ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಪೂರ್ವಭಾವಿ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸುವುದೇ ಈ ಕಾರ್ಯಕ್ರಮಗಳ ಮೂಲ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಯೋಗ ಸಂಸ್ಥೆಗಳ ನೆರವಿನಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ ತಿಳಿಸಿದರು.
ಮೈಸೂರಿನವರಿಗೆ ಇದೊಂದು ಹಬ್ಬವಾಗಿದೆ. ಕೇಂದ್ರ ಯೋಗ ಆಯುಷ್ ಇಲಾಖೆ ನೀಡುವ ನಿಯಮಗಳನ್ನು ಎಲ್ಲರೂ ಪಾಲಿಸಿ ಯೋಗಾಸನ ಮಾಡಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಲು ಮುಂದಾಗಿದ್ದೇವೆ ಎಂದು ಮೈಸೂರು ಯೋಗ ಸಂಸ್ಥೆಯ ಉಪಾಧ್ಯಕ್ಷ ಪಶುಪತಿ ಹೇಳಿದರು.
ಯೋಗ ಮಾಡುವುದರಿಂದ ದೇಹ ಹಾಗೂ ಮನಸ್ಸು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ ಹಾಗೂ ಎಲ್ಲಾ ನರ ನಾಡಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ ಎಂದು ಯೋಗ ಶಿಕ್ಷಕಿ ರಜನಿ ತಿಳಿಸಿದರು.
ಪತಂಜಲಿ ಯೋಗ ಸಂಸ್ಥೆಯು ಕಳೆದ 45 ವರ್ಷಗಳಿಂದ ಉಚಿತವಾಗಿ ಯೋಗ ಕಲಿಸುತ್ತಿದೆ. ಯೋಗದಿಂದ ಉತ್ತಮ ಆರೋಗ್ಯದ ಬಗ್ಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ಎಲ್ಲರೂ ಯೋಗವನ್ನು ಅಳವಡಿಸಿಕೊಂಡರೆ ರೋಗದಿಂದ ದೂರವಿದ್ದು ಸಮತೋಲನದ ಜೀವ ನಡೆಸಲು ಸಾಧ್ಯ ಎಂದು ಯೋಗ ಶಿಕ್ಷಕ ಶ್ರೀಶೈಲ ಹೇಳಿದರು.





