ಮೈಸೂರು : ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಇಂದು ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು.
ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಯಶ್ ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.
ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ.