ಮೈಸೂರು: ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು (ಏ.೧) ಜಿಲ್ಲಾ ಚುನಾವಣಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್, ಶಾಸಕ ಶ್ರೀವತ್ಸ ಜತೆ ಸೇರಿ ನಾಮಪತ್ರ ಸಲ್ಲಿಸಿದರು.
ಉಮೇದುಗಾರಿಗೆ ಸಲ್ಲಿಸುವ ವೇಳೆ ತಮ್ಮ ಆಸ್ತಿ ವಿವರಗಳನ್ನು ಸಹಾ ನಮೂದಿಸಿರುವ ಯದುವೀರ್ ಅವರು ತಮಗೆ ಯಾವುದೇ ಕೃಷಿ ಜಮೀನು ಹಾಗೂ ಸ್ವಂತ ಮನೆಯಿಲ್ಲ ಎಂದು ಹೇಳಿಕೊಂಡಿದ್ದಾರೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಳಿ ಆಸ್ತಿ ಎಷ್ಟಿದೆ ಎನ್ನುವುದನ್ನು ನೋಡುವುದಾದರೆ, ಚರಾಸ್ತಿ ಮೌಲ್ಯ 4,99,59,303 ರೂಪಾಯಿ ಇದೆ. ಆದ್ರೆ, ಯದುವೀರ್ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ, ಸ್ವಂತ ಮನೆ ಇಲ್ಲ ಇಲ್ಲದಿರುವುದೇ ವಿಶೇಷ.
ಇನ್ನು ಯದುವೀರ್ ಒಡೆಯರ್ ಅವರ 2 ಬ್ಯಾಂಕ್ ಖಾತೆಗಳಲ್ಲಿ 23.55 ಲಕ್ಷ ಹಣ ಇದೆ. ಒಂದು ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರ್ ಹೊಂದಿದ್ದಾರೆ. ಇನ್ನು 4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ಇದೆ ಎಂದು ನಾಮಪತ್ರ ಅಫಿಡೆವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಯದುವೀರ್ ಅವರು ಮಹಾರಾಜರೇ ಆಗಿದ್ದರು, ಅವರ ಬಳಿ ಯಾವುದೇ ಕೃಷಿ ಭೂಮಿ, ಸ್ವಂತ ಮನೆ ಇಲ್ಲ. ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್ನಿಂದ ಸಾಲ ಸಹ ಪಡೆದಿಲ್ಲ. ಯಾವುದೇ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ಮತ್ತು ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.