ಮೈಸೂರು: ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿನ ಶಂಕರಮಠದಲ್ಲಿ ವಾಸ್ತವ್ಯ ಹೂಡಿರುವ ಶೃಂಗೇರಿಮಠದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅರಮನೆಗೆ ಭೇಟಿ ನೀಡಿದಾಗ ರಾಜಮನೆತನದ ಸಂಪ್ರದಾಯದಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಅರಮನೆಗೆ ಭೇಟಿ ನೀಡಿದಾಗ ಪೂರ್ಣಕುಂಭ,ಮಂತ್ರಘೋಷದೊಂದಿಗೆ ರಾಜವಂಶಸ್ಥರು ಬರಮಾಡಿಕೊಂಡರು. ನಂತರ,ಅರಮನೆ ಕಲ್ಯಾಣಮಂಟಪದಲ್ಲಿ ರಾಜವಂಶಸ್ಥರಾದ ಪ್ರಮೋದದೇವಿ ಒಡೆಯರ್, ಯದುವೀರ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಶ್ರೀವಿಧುಶೇಖರ ಭಾರತಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.
ಫಲತಾಂಬೂಲ ಸ್ವೀಕರಿಸಿದ ಶ್ರೀಗಳು ವಿಶೇಷ ಆಶೀರ್ವಾದ ಮಾಡಿದರು. ರಾಜಮನೆತನದವರು ವಿಜಯಯಾತ್ರೆ ಹೊರಡುವ ಮುನ್ನ ಶ್ರೀಗಳು, ಯತಿವರ್ಯರ ಆಶೀರ್ವಾದ ಪಡೆದುಕೊಂಡು ಹೆಜ್ಜೆ ಇಡುವುದು ಮೊದಲಿನಿಂದಲೂ ಸಂಪ್ರದಾಯವಾಗಿದೆ. ಈ ಬಾರಿ ಯದುವೀರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಸಂದರ್ಭದಲ್ಲೇ ಶೃಂಗೇರಿ ಶ್ರೀಗಳು ಮೈಸೂರಿಗೆ ಆಗಮಿಸಿದಲ್ಲದೆ, ಅರಮನೆಗೆ ಭೇಟಿ ನೀಡಿ ಮರ್ಯಾದೆ ಸ್ವೀಕರಿಸಿದರು.