ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಇಂದು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ವೀರನಹೊಸಹಳ್ಳಿ ಗ್ರಾಮದ ಬಳಿ ಗಜಪಡೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಶುಸಂಗೋಪನಾ ಸಚಿವ ವೆಂಕಟೇಶ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಒಟ್ಟು 14 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಇಂದು ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸುತ್ತಿವೆ.
ಅಭಿಮನ್ಯು, ಭೀಮ, ಕಂಜನ್, ಧನಂಜಯ, ಪ್ರಶಾಂತ, ಮಹೇಂದ್ರ, ಏಕಲವ್ಯ, ಕಾವೇರಿ ಹಾಗೂ ಲಕ್ಷ್ಮೀ ಸೇರಿ 9 ಆನೆಗಳು ನಾಡಿನತ್ತ ಪಯಣ ಬೆಳೆಸಿವೆ.
ಗಜಪಯಣಕ್ಕೆ ಹತ್ತಾರು ಜಾನಪದ ಕಲಾತಂಡಗಳು ಮೆರುಗು ತಂದವು. ಈ ವೇಳೆ ಗಜಪಯಣ ವೀಕ್ಷಣೆ ಮಾಡಲು ನೂರಾರು ಜನರು ಜಮಾವಣೆಗೊಂಡಿದ್ದರು.
ಗಜಪಯಣ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜಿ.ಡಿ.ಹರೀಶ್ ಗೌಡ, ಪುಷ್ಪಾ ಅಮರನಾಥ್, ಸೇರಿದಂತೆ ಹಿರಿಯ ಅರಣ್ಯಾಧಿಕಾರಿಗಳು ಭಾಗಿಯಾಗಿದ್ದರು.





