ಮೈಸೂರು : ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ಖ್ಯಾತ ಸರೋದ್ ವಾದಕರಾದ ಪಂಡಿತ್ ರಾಜೀವ್ ತಾರಾನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಅವರು, ಪಂಡಿತ್ ರಾಜೀವ್ ತಾರಾನಾಥ್ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಸಂಗೀತದ ಮೂಲಕ ಇಡೀ ಸಮಾಜವನ್ನೇ ಒಟ್ಟಾಗಿ ಕೂಡಿಸುವಂತ ಒಬ್ಬ ಮಾಂತ್ರಿಕ ಹಾಗೂ ದಿಗ್ಗಜನನ್ನು ಕಳೆದುಕೊಂಡು ದೇಶದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಅನುಭವಿಸುತ್ತಿದೆ ಎಂದರು.
ಸ್ವಯಂ ಪ್ರೇರಿತನಾಗಿ ಹಾಗೂ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ 10ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಬಂದಿದ್ದೆ. ಆರ್ಥಿಕ ಸಂಕಸ್ಟದಲ್ಲಿದ ಅವರಿಗೆ ಅವರ ಚಿಕಿತ್ಸೆ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ಹೇಳಿ ಬಂದಿದ್ದೆ ಎಂದರು.
ಆಸ್ಪತ್ರೆಯಲ್ಲಿ ಸುಮಾರು 45ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿದೆ. ಆಗ ಅವರ ತಾಯಿ ದಲಿತರು ಎಂದು ಹೇಳಿದ್ದರು. ಅದನ್ನು ಸಮಾಜದ ಮುಂದೆ ಹೇಳಿ ಎಂದು ಕೇಳಿದೆ. ಆಸ್ಪತ್ರೆಯಿಂದ ಹೊರ ಬಂದ ಕೂಡಲೆ ಸುದ್ದಿಗೋಷ್ಠಿನಡೆಸಿ ಹೇಳುವುದಾಗಿ ಹೇಳಿದ್ದರು. ಆದರೆ ಅದನ್ನು ಹೇಳುವ ಮೊದಲೇ ಅವರು ನಮ್ಮನ್ನು ಅಗಲಿದ್ದಾರೆ ಎಂದರು.
ಸರ್ಕಾರ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ಮಾಡಲು ಮುಖ್ಯಮಂತ್ರಿಗಳನ್ನು ಸೂಚನೆ ನೀಡಿದ್ದಾರೆ ಅದರಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಮಹದೇವಪ್ಪ ತಿಳಿಸಿದರು.
ಸ್ಮಾರಕ ನಿರ್ಮಾಣ : ಅಂತ್ಯಕ್ರಿಯೆ ಮುಗಿದ ಬಳಿಕ ಪಂಡಿತ್ ರಾಜೀವ್ ತಾರಾನಾಥ್ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಕೆಲಸವನ್ನು ಕುಟುಂಬದವರೊಂದಿಗೆ ಚರ್ಚೆ ನಡೆಸಿ ಸರ್ಕಾರದ ವತಿಯಿಂದ ಮಾಡುತ್ತೇವೆ ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.