ಕೆ.ಆರ್.ನಗರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಕಾಂಗ್ರೆಸ್ ಸರ್ಕಾರದಿಂದ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಕರ್ನಾಟಕ ವಸ್ತು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ ಆರೋಪಿಸಿದರು.
ಪಟ್ಟಣದಲ್ಲಿ ೯ನೇ ವಾರ್ಡ್ ಸೇರಿದಂತೆ ಅನೇಕ ಕಡೆಗಳಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುವಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮನೆ ಮನೆಗೆ, ಪಾರ್ಕ್‌ಗಳಿಗೆ ತೆರಳಿ ಮತಾಯಾಚನೆ ಮಾಡಿ ಅವರು ಮಾತನಾಡಿದರು.
ಜನರು ಬದುಕಿನ ಬಗ್ಗೆ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಈ ಸರ್ಕಾರದಲ್ಲಿ ಶಾಂತಿ, ನೀರು, ಮಹಿಳೆಯರ ಮಾನ, ಪ್ರಾಣ, ರೈತರ ಬದುಕು, ಭಾವನೆ ಯಾವುದಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ. ಗಲಭೆಕೋರರು, ಭಯೋತ್ಪಾದಕರಿಗೆ ರಕ್ಷಣೆಯ ಗ್ಯಾರಂಟಿ ಸಿಗುತ್ತಿದೆ. ವಿದ್ಯುತ್ ದರ ಏರಿಕೆಯ ಗ್ಯಾರಂಟಿ, ವಿವಿಧ ತೆರಿಗೆ ಹೆಚ್ಚಳದ ಗ್ಯಾರಂಟಿ ನೀಡುತ್ತಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಗಳನ್ನು ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಅಮಾನುಷ ಹತ್ಯೆ ಆಗಿದೆ. ತನ್ನದೇ ಪಕ್ಷದ ಚುನಾಯಿತ ಪ್ರತಿನಿಧಿ ಮಗಳ ಹತ್ಯೆಗೆ ನ್ಯಾಯ ಒದಗಿಸುವುದನ್ನು ಬಿಟ್ಟು ಆರೋಪಿಗೆ ರಕ್ಷಣೆ ಭಾಗ್ಯ ಒದಗಿಸಿದ ಸರ್ಕಾರ ಇದು ಎಂದು ಕಿಡಿ ಕಾರಿದರು.
ನಮ್ಮ ಒಕ್ಕಲಿಗ ಜನಾಂಗಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರೇ ನಾಯಕರು ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಎಚ್.ಡಿ. ಪ್ರಭಾಕರ್ ಜೈನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಉಮಾ ಶಂಕರ್, ಹೊಸೂರು ಅನಿಲ್, ಸಾಲಿಗ್ರಾಮ ನಟರಾಜ್, ಅರಕೆರೆ ಮಧು, ದೊರೆಸ್ವಾಮಿ, ಕೆ.ಆರ್.ಮಂಜು, ಶಿವರಾಜ್ ಮೊದಲಾದವರು ಹಾಜರಿದ್ದರು.