ಮೈಸೂರು: ಇತ್ತೀಚೆಗೆ ಗಾಯಗೊಂಡಿದ್ದ ನಾಗರಹೊಳೆಯ ಆನೆಮರಿಗೆ ಚಿಕಿತ್ಸೆ ನೀಡಲಾಗಿದ್ದು, ಮರಿಯು ಚೇತರಿಕೆ ಕಂಡುಕೊಂಡಿದೆ. ತನ್ನ ತಾಯಿಯೊಂದಿಗೆ ಸುರಕ್ಷಿತವಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷ ಚಿಕ್ಕನರಗುಂದ ತಿಳಿಸಿದ್ದಾರೆ.
ರಾಹುಲ್ ಅ. 5ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಮಯದಲ್ಲಿಗಾಯಗೊಂಡ ಆನೆ ಮರಿಯೊಂದು ತನ್ನ ತಾಯಿಯೊಂದಿಗೆ ಕರುಣಾಜನಕ ಸ್ಥಿತಿಯಲ್ಲಿಸಂಚರಿಸುವುದನ್ನು ಗಮನಿಸಿದ್ದರು. ಆನೆ ಮರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಅಂತರಸಂತೆ ವನ್ಯ ಜೀವಿ ವಲಯದ ಬಿಸಿಲವಾಡಿ ಕೆರೆ ಬಳಿ ಡಾ. ಪ್ರಸನ್ನ ಡಾ ವಾಸಿಮ್ ಮತ್ತು ಇಲಾಖೆಯ ಸಿಬ್ಬಂದಿ ಆನೆ ಮರಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮರಿಯಾನೆ ಸುಮಾರು 1 ತಿಂಗಳ ಗಂಡು ಮರಿಯಾಗಿದ್ದು ಆನೆ ಸೊಂಡಿಲು, ಬೆನ್ನು ಹಾಗೂ ಬಾಲದಲ್ಲಿ ಗಾಯವಾಗಿತ್ತು. ಕಾಡು ನಾಯಿ ದಾಳಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದಾಳಿ ವೇಳೆ ತಾಯಿ ಆನೆ ನಾಯಿಯನ್ನ ಓಡಿಸಿದೆ ಅಂತ ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
.





