ಮೈಸೂರು : ರಾಷ್ಟ್ರೀಯ ಭದ್ರತೆಗಾಗಿ ನಾಗರಿಕರು ಘೋಷವಾಕ್ಯದಡಿ ಮೈಸೂರಿನಲ್ಲಿ ಶುಕ್ರವಾರ ನಡೆದ ತಿರಂಗಾ ಯಾತ್ರೆಯಲ್ಲಿ ದೇಶದ ಮೂರು ಸೇನೆಗಳಿಗೆ ಬಹುಪರಾಕ್ ಹೇಳುವ ಮೂಲಕ ದೇಶಭಕ್ತಿಯನ್ನು ಅನಾವರಣಗೊಳಿಸಿ, ವೀರ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಆಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆ ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ತಿರಂಗಾ ಯಾತ್ರೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿದ ಸಾರ್ವಜನಿಕರು ದೇಶದ ಪರ ಜಯಘೋಷ ಮೊಳಗಿಸಿದರು.
ನಗರದ ಜನರಲ್ ಕಾರ್ಯಪ್ಪ ವೃತ್ತದ ಬಳಿ ಜಮಾಯಿಸಿದ ವಿವಿಧ ಕಾಲೇಜು ವಿದ್ಯಾರ್ಥಿಗಳು, ಬಿಜೆಪಿ ಕಾರ್ಯಕರ್ತರು, ಮೈಸೂರಿನ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು ತಿರಾಂಗವನ್ನಿಡಿದು ಶಿವರಾಂಪೇಟೆ ರಸ್ತೆ, ಕೆ.ಆರ್ ವೃತ್ತ, ಡಿ.ದೇವರಾಜು ರಸ್ತೆ ಮುಖೇನ ಮತ್ತೆ ಕಾರ್ಯಪ್ಪ ವೃತ್ತದ ಬಳಿ ಬಂದರು.
ತಿರಂಗ ಯಾತ್ರೆಯಲ್ಲಿ ಜೆಎಸ್ಎಸ್ ದೇಶೀಕೇಂದ್ರ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಬಿಜಿಎಸ್ ಸೋಮನಾಥೇಶ್ವರ ಸ್ವಾಮೀಜಿ ಮತ್ತು ವಿವಿಧ ಧರ್ಮದ ಧಾರ್ಮಿಕ ಗುರುಗಳು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು.