Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕೊನೆಗೂ ಬೋನಿಗೆ ಬಿದ್ದ ಹೆಣ್ಣು ಹುಲಿ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಸರಗೂರು : ತಾಲ್ಲೂಕಿನ ಜಯಲಕ್ಷ್ಮೀಪುರ ಹಾಗೂ ಶಿವಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ೧೧ರಿಂದ ೧೨ ವರ್ಷದ ಹೆಣ್ಣು ಹುಲಿ ಶಿವಪುರ ಮುಂಟಿಯ ಬಳಿ ಅಳವಡಿಸಲಾಗಿದ್ದ ಬೋನಿನಲ್ಲಿ ಭಾನುವಾರ ಬೆಳಗ್ಗೆ ಸೆರೆಯಾಗಿದೆ.

ಇಲಾಖಾ ಪಶುವೈದ್ಯಾಧಿಕಾರಿ ವಾಸಿಂ ಮಿರ್ಜಾ ಅವರ ನೇತೃತ್ವದಲ್ಲಿ ಅರಿವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಹುಲಿಯನ್ನು ಸುರಕ್ಷಿತವಾಗಿ ಹಿಡಿಯಲಾಗಿದ್ದು, ಕಾಲು ಹಾಗೂ ಭುಜದ ಭಾಗದಲ್ಲಿ ಗಾಯಗಳಾಗಿವೆ. ಹಲ್ಲು ಹಾಗೂ ದವಡೆಗಳು ಶಕ್ತಿಹೀನವಾಗಿರುವ ಬಗ್ಗೆ, ವೈದ್ಯಾಧಿಕಾರಿಗಳು ತಿಳಿಸಿದ್ದು, ಚಿಕಿತ್ಸೆ ಹಾಗೂ ಶುಶ್ರೂಷೆಗಾಗಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ ಎಂದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:-ಮದ್ದೂರು | ಪೌತಿ ಖಾತೆ ಮಾಡಲು ಲಂಚ : ಪಿಡಿಒ ಲೋಕಾ ಬಲೆಗೆ

ಕೆಲವು ದಿನಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ವಲಯ ವ್ಯಾಪ್ತಿಯ ಜಯಲಕ್ಷ್ಮೀಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಸೆ.೨೯ರಿಂದ ಈಚೆಗೆ ಮೇಕೆ ಮತ್ತು ಹಸುವನ್ನು ಕೊಂದಿತ್ತು. ಅರಣ್ಯ ಇಲಾಖೆಯವರು ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಇಲಾಖೆ ಸಿಬ್ಬಂದಿಗೆ ದಿಗ್ಬಂಧನ ವಿಧಿಸಿದ್ದರು. ಅಲ್ಲದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗದ ವ್ಯಾಪ್ತಿಯ ಹೆಡಿಯಾಲ ವಲಯದ ಚಿಕ್ಕಬರಗಿ ಶಾಖೆಯ ಅಳಲಹಳ್ಳಿ ಗಸ್ತಿನ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಹುಲಿಯು ಅರಣ್ಯ ಪ್ರದೇಶದಿಂದ ಹೊರಬಂದು ಜನವಸತಿ ಪ್ರದೇಶಗಳಲ್ಲಿ ಜಾನುವಾರು ಹತ್ಯೆ ಮುಂದುವರಿಸಿತ್ತು. ಈ ಸಂಬಂಧ ಹುಲಿ ಸೆರೆಗೆ ತಂಡವನ್ನು ರಚಿಸಿ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಲ್ಲದೆ ೩ ಕಡೆ ಬೋನುಗಳನ್ನು ಇರಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ವಲಯ ಅರಣ್ಯಾಧಿಕಾರಿ ವಿ.ಮುನಿರಾಜು, ಉಪ ವಲಯ ಅರಣ್ಯಾಧಿಕಾರಿ ರಘುನಾಥ್ ದೇವೇಗೌಡ, ಕಾರ್ತಿಕ್, ಕೆ.ಸೋಮ, ಪಶುವೈದ್ಯಾಧಿಕಾರಿ ವಸಿಂ ಮಿರ್ಜಾ ಹಾಗೂ ಹೆಡಿಯಾಲ ವಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:
error: Content is protected !!