ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬೆಂಬಲ ನೀಡಲಿದೆ ಎಂಬ ಭರವಸೆಯನ್ನು ಕೇಂದ್ರ ಶಿಕ್ಷಣ ಸಚಿವರಾದ ಡಾ. ಸುಕಾಂತ ಮಜುಂದಾರ್ ನೀಡಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ಕೇಂದ್ರ ಶಿಕ್ಷಣ ಸಚಿವರು ಸವಿವರವಾದ ಉತ್ತರ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರು ಹಲವಾರು ವಿವರಗಳನ್ನು ಹಂಚಿಕೊಂಡಿದ್ದಾರೆ.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಪೂರ್ಣ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ ನೀಡಲಾಗಿಲ್ಲ, ಈ ಕೇಂದ್ರದ ಕಾರ್ಯಕ್ಷಮತೆ ಮತ್ತು ಸವಾಲುಗಳು ಹಾಗೂ ಕೇಂದ್ರದ ಸ್ವಾಯತ್ತತೆಗಾಗಿ ರಾಜ್ಯಸರ್ಕಾರ ಅಥವಾ ಕನ್ನಡ ಸಾಹಿತ್ಯ ಸಂಸ್ಥೆಗಳಿಂದ ಶಿಫಾರಸ್ಸುಗಳನ್ನು ಸ್ವೀಕರಿಸಿದೆಯೇ ಮತ್ತು ಇದರ ಸ್ವಾಯತ್ತ ಸ್ಥಾನಮಾನಕ್ಕಾಗಿ ಪ್ರಸ್ತಾಪ ಇದೆಯೇ? ಎಂದು ಕೇಂದ್ರ ಶಿಕ್ಷಣ ಸಚಿವರಿಂದ ಉತ್ತರ ಕೋರಲಾಗಿತ್ತು ಎಂದು ಸಂಸದರು ತಿಳಿಸಿದ್ದಾರೆ.
ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ (ಸಿಐಐಎಲ್) ಆವರಣದಲ್ಲಿ ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರ (ಸಿಇಎಸ್‌ಸಿಕೆ)ವನ್ನು ಈಗ ಕೋರಿಕೆಯ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ – 2020 ಶಾಸ್ತ್ರೀಯ ಕನ್ನಡ ಮತ್ತು ಇತರ ಶಾಸ್ತ್ರೀಯ ಭಾಷೆಗಳನ್ನು ಒಳಗೊಂಡಂತೆ ಎಲ್ಲಾ ಭಾರತೀಯ ಭಾಷೆಗಳ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಲು ಗಮನಹರಿಸಲಾಗಿದೆ. ಸಿಇಎಸ್‌ಸಿಕೆ ಸೇರಿದಂತೆ ಎಲ್ಲಾ ಶಾಸ್ತ್ರೀಯ ಕೇಂದ್ರಗಳ ಕಾರ್ಯಕ್ಷಮತೆಯನ್ನು ವ್ಯವಸ್ಥಿತವಾಗಿ ಪರಿಶೀಲಿಸಲು ಮತ್ತು ನಿರ್ಣಯಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರದ ಬೆಳವಣಿಗೆಗೆ ಬೆಂಬಲ ನೀಡಲಾಗುತ್ತದೆ. ಕೇಂದ್ರದ ವಽತ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ





