ಮೈಸೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ ಸಂಭವಿಸಲು ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಶಾಸಕ ಶ್ರೀವತ್ಸ ಹಾಗೂ ಮಾಜಿ ಶಾಸಕ ಎಲ್.ನಾಗೇಂದ್ರ ಆರೋಪಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಅಧಿಕಾರಿಗಳು ಹೊಣೆ ಎಂದು ಅವರನ್ನೇ ಸಸ್ಪೆಂಡ್ ಮಾಡಿದ್ದಾರೆ. ಅದೇ ಮೈಸೂರು ಮುಡಾ ಹಗರಣದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ? ಎಂದು ಪ್ರಶ್ನೆ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರ ಲಾಭ ಹಾಗೂ ಅನುಕೂಲಕ್ಕೆ ತಕ್ಕಂತೆ ಅಧಿಕಾರ ದುರ್ಬಳಕೆ ಮಾಡ್ತಿದ್ದಾರೆ. ವಿಧಾನಸೌಧದ ಬಳಿ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟೋರು ಯಾರು? ಇದಕ್ಕೆಲ್ಲಾ ನೇರ ಹೊಣೆ ಸಿಎಂ ಹಾಗೂ ಡಿಸಿಎಂ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆಯನ್ನು ಬಲಿ ಪಶು ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಎಲ್.ನಾಗೇಂದ್ರ ಅವರು, ರಾಜ್ಯ ಸರ್ಕಾರ ಈ ಕಾರ್ಯಕ್ರಮದ ಮೂಲಕ ಅಮಾಯಕರನ್ನು ಬಲಿ ಪಡೆದುಕೊಂಡಿದೆ. ಪ್ರಚಾರದ ಗೀಳಿನಿಂದಲೇ ಈ ಘಟನೆ ಸಂಭವಿಸಿದೆ. ಪೊಲೀಸರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಆದರೆ ಪ್ರಾಮಾಣಿಕ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಿಎಂ ಸಿದ್ದರಾಮಯ್ಯರಿಗೆ ರಾಜ್ಯದ ಜನರ ಮೇಲೆ ಕಿಂಚಿತ್ತೂ ಗೌರವವಿಲ್ಲ. ಗೌರವವಿದ್ದರೆ ಈಗಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಗ್ರಹಿಸಿದರು.





