ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ದೇವನೂರು ಮಠದಲ್ಲಿ ಶ್ರೀ ಶ್ರೀ ಗುರುಮಲ್ಲೇಶ್ವರರ 125ನೇ ಆರಾಧನಾ ಮಹೋತ್ಸವದ ಸಂಭ್ರಮ ಮನೆಮಾಡಿದೆ.
ಹಸಿದು ಬಂದ ಸಾವಿರಾರು ಜನರಿಗೆ ಅನ್ನದಾಸೋಹ ಮಾಡಿ, ಇತಿಹಾಸ ಪ್ರಸಿದ್ಧವಾಗಿರುವ ದೇವನೂರಿನ ಶ್ರೀ ಶ್ರೀ ಗುರುಮಲ್ಲೇಶ್ವರ ಮಠದಲ್ಲಿ ಇಂದು( ಜೂನ್ 23 ) ಮತ್ತು ನಾಳೆ ( ಜೂನ್ 24 ) ಗುರುಮಲ್ಲೇಶ್ವರರ 125ನೇ ಆರಾಧನಾ ಮಹೋತ್ಸವ ನೆರವೇರಲಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ದೇವನೂರು ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಮಧುವಣಗಿತ್ತಿಯಂತೆ ಶೃಂಗರಿಸಲಾಗಿದೆ.
ಇನ್ನು ಆರಾಧನೆಯ ಅಂಗವಾಗಿ ಗುರುಮಲ್ಲೇಶ್ವರರ ಮಠವನ್ನು ಸಹ ವಿವಿಧ ಹೂ ಹಾಗೂ ಹಣ್ಣುಗಳಿಂದ ಅಲಂಕಾರ ಮಾಡಿ ಶೃಂಗರಿಸಲಾಗಿದ್ದು, ಸಾವಿರಾರು ಮಂದಿ ಭಕ್ತರಿಂದಲೇ ಮಠವನ್ನು ಶೃಂಗರಿಸಲಾಗಿದೆ ಎಂದು ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರಾಧನಾ ಮಹೋತ್ಸವದ ಪ್ರಯುಕ್ತ ಸಾವಿರಾರು ಮಂದಿ ಮಠಕ್ಕೆ ಭೇಟಿ ನೀಡಿ, ಶ್ರೀ ಗುರುಮಲ್ಲೇಶ್ವರರ ಗದ್ದುಗೆ ದರ್ಶನ ಪಡೆದು ಪುನೀತರಾಗಿದ್ದಾರೆ. ಇನ್ನು ಪ್ರಸಾದ ವಿತರಣೆಯನ್ನು ಸಹ ಮಾಡಲಾಗಿದೆ.