ಮೈಸೂರು: ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ ನಿಂದಾಗಿ ಮೈಸೂರು ನಗರ ಉದ್ವಿಗ್ನಗೊಂಡಿದೆ.
ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರಗಳನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಮುಸ್ಲಿಂ ಸಮುದಾಯ ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದಗಳನ್ನು ಬರೆದು ಸಾರ್ವಜನಿಕವಾಗಿ ಹಂಚಿಕೆ ಮಾಡಿರುವುದೇ ಮುಸ್ಲಿಂ ಸಮುದಾಯ ಉದ್ವಿಗ್ನಗೊಳ್ಳಲು ಕಾರಣವಾಗಿದೆ.
ಪೋಸ್ಟರ್ ಕುರಿತು ಸೋಮವಾರ ರಾತ್ರಿ ಮಾಹಿತಿ ತಿಳಿದ ಮುಸ್ಲಿಂ ಸಮುದಾಯದ ಸಾವಿರಾರು ಮಂದಿ ಏಕಕಾಲದಲ್ಲಿ ಉದಯಗಿರಿ ಮುಖ್ಯ ರಸ್ತೆ ತೆಡೆದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಒಂದು ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿತಲ್ಲದೆ, ತಪ್ಪಿತಸ್ಥನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಕೂಡಲೇ ಹೆಚ್ಚುವರಿ ಪಡೆ ಕರೆಸಿಕೊಂಡು ಪರಿಸ್ಥಿತಿ ನಿಯಂತ್ರಿಸುವ ಕೆಲಸ ಮಾಡುವ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಕಂಡ ಪೊಲೀಸರು ಕೂಡಲೇ ಲಾಠಿ ಪ್ರಹಾರ ಮಾಡಿದರಲ್ಲದೆ, ಆಶ್ರುವಾಯು ಸಿಡಿಸಿ ಗುಂಪುಗೂಡಿದವರನ್ನು ಚದುರಿಸಿದರು.
ತದನಂತರ ಒಂದು ಸಮುದಾಯದ ಗುಂಪಿನ ಪ್ರಮುಖರು ತಮ್ಮ ಜನರನ್ನು ಸಂತೈಸುವ ನಿಟ್ಟಿನಲ್ಲಿ ಕೆಲಸ ಮಾಡಿದರಾದರೂ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿತು. ಈ ವೇಳೆ ರಾಜ್ಯ ಮೀಸಲು ಪೊಲೀಸ್ ಪಡೆ ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ತುಕಡಿಗಳನ್ನು ಸ್ಥಳಕ್ಕೆ ಕರೆಸಿ ಆಕ್ರೋಶಭರಿತ ಗುಂಪನ್ನು ಚದುರಿಸಲಾಯಿತು.
ಸದ್ಯ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಇಲಾಖೆಯ ಹಿರಿಯ ಉನ್ನತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.