ಮೈಸೂರು: ಒಳ ಮೀಸಲಾತಿ ಜಾರಿ ಕುರಿತ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾದರೂ, ಜಾರಿ ವೇಳೆ ರಾಜ್ಯ ಸರ್ಕಾರ ಸಂಬಂಧಿತ ಜಾತಿಗಳ ಔದ್ಯೋಗಿಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತ ಇತ್ತೀಚಿನ ಸ್ಥಿತಿಗತಿ ಸಮೀಕ್ಷೆ ನಡೆಸಬೇಕಾದ ಅಗತ್ಯವಿದೆ ಎಂದು ರಾಜ್ಯ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ದಾಸಯ್ಯ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡದಂತೆ ಪರಿಶಿಷ್ಟ ಜಾತಿಯಲ್ಲಿ ಬರುವ ಉಪ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗದ ಬಗ್ಗೆ ಖಚಿತವಾದ ಅಂಕಿ ಅಂಶಗಳನ್ನೊಳಗೊಂಡ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರ ನ್ಯಾಯಯುತ ವರ್ಗೀಕರಣ ಮಾಡಬೇಕು, ವರ್ಗೀಕರಣವು ನ್ಯಾಯಯುತವಾದ, ಅಗತ್ಯವಾದ, ಪೂರ್ಣ ಅಂಕಿ ಅಂಶಗಳನ್ನು ಒಳಗೊಂಡಿರಬೇಕೆಂದು ತಿಳಿಸಿದೆ. ಹೀಗಾಗಿ ಇದನ್ನು ಪಾಲನೆ ಮಾಡಬೇಕು. ಈಚೆಗೆ ಜನಗಣತಿ ನಡೆದಿಲ್ಲ. ಈಗ ರಾಜ್ಯ ಸರ್ಕಾರ ಪಡೆದಿರುವ ಜಾತಿಗಣತಿ ವರದಿ ಸಹಾ ಪೂರ್ಣ ಮಾಹಿತಿ ಒಳಗೊಂಡಿಲ್ಲ. ಹೀಗಾಗಿ ಗ್ರಾಮ ಲೆಕ್ಕಿಗರು, ಮೊದಲಾದವರನ್ನು ಬಳಸಿಕೊಂಡು, ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೂಡಲೇ ರಾಜ್ಯದಾದ್ಯಂತ ಈ ರೀತಿಯ ಅಂಕಿ ಅಂಶ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಜೊತೆಗೆ, ಕೇಂದ್ರ ಸರ್ಕಾರ ಸದ್ಯದಲ್ಲಿಯೇ 2021 ರ ಜನಗಣತಿ ನಡೆಸುವ ಸಾಧ್ಯತೆ ಇರುವುರಿಂದ ಈ ಜಾತಿಗಳ ಜನಸಂಖ್ಯೆ, ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಮೂಲಕ ಸುಪ್ರೀಂಕೋರ್ಟಿನ ತಿರ್ಪಿನಲ್ಲಿ ನೀಡಿರುವ ಮಾನದಂಡ ಪಾಲಿಸಲು ಸಾಧ್ಯವಾಗಬಹುದಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮನವಿಯೊಂದನ್ನು ಸಲ್ಲಿಸಬೇಕು ಎಂದರು.
ಸಿಂಧುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಉಮಾಪತಿ ಹಾಗೂ ದಾಸಯ್ಯ ಅವರ ಇನ್ನಿತರ ವಕೀಲ ಮಿತ್ರರು ಹಾಜರಿದ್ದರು.