ಮೈಸೂರು: ಶ್ರೀನಿವಾಸ್ ಪ್ರಸಾದ್ ಅವರು ನಮ್ಮನ್ನು ಅಗಲಿರುವುದು ತುಂಬಾ ನೋವಾಗಿದೆ. ಅವರು ಒಬ್ಬ ಪ್ರಮಾಣಿಕ ರಾಜಕಾರಣಿಯಾಗಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಿಸಿದರು.
ಶ್ರೀನಿವಾಸಪ್ರಸಾದ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಪ್ರಸಾದ್ ಸಮಾಜಕ್ಕಾಗಿ ಹೋರಾಟ ಮಾಡಿದ್ದಾರೆ. ಅವರು ಧೈರ್ಯವಾಗಿ ಮುನ್ನುಗ್ಗಿದ ಪ್ರಮಾಣಿಕ ರಾಜಕಾರಣಿಯ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವದಲ್ಲಿ ನಂಬಿಕೆ ಇಟ್ಟು, ಜೀವನದುದ್ದಕ್ಕೂ ಮಾದರಿಯಾಗಿ ಬದುಕಿದ್ದರು ಎಂದರು.
ಸ್ವಾಭಿಮಾನದಿಂದ ಬದುಕಿ, ದಲಿತ ಸಮುದಾಯಕ್ಕೆ ಶಕ್ತಿ ತುಂಬಿದವರು. ಇದೀಗ ಅನಾರೋಗ್ಯದಿಂದ ನಮ್ಮನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ನೀಡಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ ಎಂದು ಹೇಳಿದರು.