ಸರಗೂರು: ಸರಗೂರು ಪಟ್ಟಣ ವ್ಯಾಪ್ತಿಯ ೧೧ನೇ ವಾರ್ಡಿನ ಬಿಡುಗಲಿನ ರೈತ ರಾಜಶೇಖರ ಎಂಬವರಿಗೆ ಸೇರಿದ ಜರ್ಸಿ ತಳಿಯ ಹಸು ಜಮೀನಿನಲ್ಲಿ ಮೇವು ಮೇಯ್ದು ಹೊಳೆಯಲ್ಲಿ ನೀರು ಕುಡಿಯಲು ಹೋಗಿದ್ದ ವೇಳೆ ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಇದರ ಅಂದಾಜು ಬೆಲೆ ೬೦ ಸಾವಿರ ರೂ.ಗಳಾಗಿದೆ ಎಂದು ಮಾಲೀಕ ರಾಜಶೇಖರ್ ತಿಳಿಸಿದ್ದಾರೆ. ಸ್ಥಳಕ್ಕೆ ಡಿ ಆರ್‌ಎಫ್ ಹೆಚ್.ಎಸ್.ಅಭಿಲಾಷ್, ಗುಮಾಸ್ತ ಭುವನೇಶ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹಸುವಿನ ಮಾಲೀಕರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಬಾಲು ಎಂಬವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹುಲಿ, ಚಿರತೆಗಳ ಕಾಟ ಹೆಚ್ಚಾಗಿದೆ. ದನ ಕರುಗಳು ಬಲಿಯಾಗುತ್ತಿವೆ ಎಂದು ದೂರಿದರು.
ಹುಲಿಯೊಂದು ಅಗತ್ತೂರು, ಸಾಗರೆ, ಮಾಗುಡಿಲು ಮಾರ್ಗದಲ್ಲಿ ಸಂಚರಿಸುತ್ತಿದ್ದು, ಗದ್ದೆ ತೆವರಿನ ಮೇಲೆ ತಿರುಗಾಡಿರುವ ಹುಲಿ ಹೆಜ್ಜೆ ಗುರುತು ಕಾಣಿಸುತ್ತದೆ ಎಂದು ಆಗತ್ತೂರು ರಾಜಣ್ಣ ತಿಳಿಸಿದರು.
ಸಂಬಂಧಪಟ್ಟ ಅರಣ್ಯ ಅಽಕಾರಿಗಳು ಹಸುವಿನ ಮಾಲೀಕರಿಗೆ ಪರಿಹಾರ ನೀಡಬೇಕು. ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ರವಿ, ಅಭಿ, ಬಿಳಿಯಯ್ಯ, ಬಿ.ಎಸ್.ಮಹೇಶ್, ಇನ್ನಿತರರು ಹಾಜರಿದ್ದರು.