ಸಂಶೋಧಕರ ತರಬೇತಿ ಕಾರ್ಯಾಗಾರ ಯಶಸ್ವಿ
ಮೈಸೂರು : ಸಂಶೋಧಕರ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿದ್ದು, ಸಂಶೋಧಕರು ಗುರಿ ಇಟ್ಟುಕೊಂಡು ಸಂಶೋಧನೆ ಮಾಡಿ ಮುಗಿಸುವುದರ ಜೊತೆಗೆ ನೀವು ಮಾಡುವ ಸಂಶೋಧನೆ ಸಮಾಜಕ್ಕೆ ಕೊಡುಗೆಯಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಪ್ರಾಧ್ಯಾಪಕರಾದ ಡಾ. ಜ್ಯೋತಿ ತಿಳಿಸಿದರು.
ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಆಯೋಜಿಸಿದ್ದ ಪರಿಶಿಷ್ಠ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ೧೦ ದಿನಗಳ ಸಂಶೋಧನಾ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸಿ ಮಾತನಾಡಿದ ಅವರು, ಸಂಶೋಧನೆ ಎಂದರೆ ಹೊಸಹೊಸ ಅವಿಷ್ಕಾರವನ್ನು ಮಾಡುವುದಾಗಿದ್ದು, ಸ್ಕಾಲರ್‌ಶಿಪ್‌ಗೋಸ್ಕರ ಸಂಶೋಧನೆ ಮಾಡುವುದಲ್ಲ. ಮೂರುವರೆ ವರ್ಷದಲ್ಲಿ ಸಂಶೋಧನೆ ಮುಗಿಸಬೇಕು. ಹೆಚ್ಚಾಗಿ ಅರಣ್ಯಾಧಾರಿತ ಬುಡಕಟ್ಟು ಜನರ ಸಮಸ್ಯೆ ಬಗ್ಗೆ ಸಂಶೋಧನೆ ಮಾಡಬೇಕು. ಗೈಡ್‌ಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಈ ಕಾರ್ಯಾಗಾರದಿಂದ ಸಂಶೋಧನೆ ಮಾಡುವ ಸಾಮರ್ಥ್ಯ ನಿಮಗೆ ಬಂದಿದೆ. ಇನ್ನೂ ಹೆಚ್ಚು ಕಾರ್ಯಕ್ರಮಗಳು ಸಂಸ್ಥೆಯಲ್ಲಿ ನಡೆಯಲಿ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ರಮಣಯ್ಯ ಮಾತನಾಡಿ ಇಂತಹ ತರಬೇತಿ ಕಾರ್ಯಾಗಾರಗಳಿಗೆ ಗೈಡ್‌ಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಸಂಶೋಧನೆ ಮಾಡಿರುವ ಗೈಡ್‌ಗಳಿಗೂ ತರಬೇತಿ ನೀಡಬೇಕು. ಜೀವನಪೂರ್ತಿ ಕಲಿಯುವುದರ ಜೊತೆಗೆ ಓದುವುದು ನಿರಂತರವಾಗಿರಬೇಕು. ಪಿ.ಹೆಚ್‌ಡಿ ಮಾಡುವುದರ ಮುಂಚೆ ಸಂಶೋಧಕರಿಗೆ ತರಬೇತಿ ನೀಡಿದರೆ ಸಂಶೋಧಕರು ಉತ್ತಮವಾದ ಟಾಪಿಕ್ ತೆಗೆದುಕೊಳ್ಳಬಹುದು ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್ ಮಾತನಾಡಿ ಸಂಶೋಧಕರು ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತರಬೇತಿ ಕೇಳಿದ್ದೀರಿ. ಹಾಡಿಗಳಿಗೆ ಹೆಚ್ಚುದಿನ ಭೇಟಿ ಮಾಡಲು ಅವಕಾಶ ಕೇಳಿದ್ದೀರಿ ನಿಮ್ಮ ಸಲಹೆಗಳನ್ನು ಮುಂಬರುವ ಕಾರ್ಯಾಗಾರಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಈ ಕಾರ್ಯಾಗಾರ ಯಶಸ್ವಿಯಾಗುವುದು ಇಲ್ಲಿ ೧೦ ದಿನ ಕಲಿತಿರುವುದನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಎಂದರು.
ಕಾರ್ಯಾಗಾರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮಾತನಾಡಿ ಈ ಕಾರ್ಯಾಗಾರದಿಂದ ನಮಗೆ ಆತ್ಮಸ್ಥೈರ್ಯ ಹೆಚ್ಚಾಗಿದೆ, ನಮಗೆ ಏನು ಗೊತ್ತಿರಲಿಲ್ಲ. ಇಲ್ಲಿ ತುಂಬಾ ಜ್ಞಾನವನ್ನು ಪಡೆದಿದ್ದೇವೆ. ಅತ್ಯುತ್ತಮ ಸಂಶೋಧನಾ ಅಭ್ಯರ್ಥಿಯಾಗಿ ಹೊರಹೊಮ್ಮಲು ಈ ಕಾರ್ಯಾಗಾರ ಅನುಕೂಲವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದಿದ್ದೇವೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಟ್ಟಿದ್ದೀರಿ. ೧೦ ದಿನಗಳ ಕಾಲ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಂಡಿದ್ದೀರಿ. ಆಯೋಜಕರಾದ ಬಿ.ಎಸ್. ಪ್ರಭಾರವರ ತಂಡಕ್ಕೆ ಧನ್ಯವಾದ ತಿಳಿಸಿದರು.
ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ. ವೆಂಕಟೇಶ್‌ಕುಮಾರ್ ಮಾತನಾಡಿದರು. ಸಂಶೋಧನಾಧಿಕಾರಿ ಕೆ. ಶ್ರೀನಿವಾಸ್, ಡಾ. ಮೋಹನ್‌ಕುಮಾರ್, ಡಾ. ಮಂಜುನಾಥ್, ಡಾ. ರವಿಕುಮಾರ್, ಡಾ. ಕಲಾವತಿ, ಡಾ. ವಿ.ಜೆ. ಗಿರೀಶ್, ಬಿ.ಆರ್. ಭವ್ಯ, ರಮೇಶ್, ವೇಣುಕಾಂತ, ಗಂಗಾಧರಯ್ಯ, ಹೇಮಚಂದ್ರ, ಡಾ. ವೆಂಕಟೇಶ್‌ಪ್ರಸಾದ್, ಗುಣಧರ್, ಪುಷ್ಪಲತಾ, ದಾಕ್ಷಾಯಿಣಿ, ಪಿ. ಮಮತ, ಕಛೇರಿ ಸಿಬ್ಬಂದಿ ಹಾಜರಿದ್ದರು.





