ಹಾಸನ: ನ.24 ರಿಂದ ಡಿ.15 ರವರೆಗೆ ಕಾರ್ಯಾಚರಣೆ ನಡೆಸಿ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಕಳೆದ ಐದು ತಿಂಗಳ ಹಿಂದೆ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವಂತೆ ಸರ್ಕಾರ ಆದೇಶ ನೀಡಿತ್ತು. ಇದೀಗ ಅರಣ್ಯ ಇಲಾಖೆ ಸರ್ಕಾರದ ಆದೇಶವನ್ನು ಪಾಲಿಸಲು ಮುಂದಾಗಿದೆ.
ಇಂದಿನಿಂದ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲ್ಲೂಕುಗಳಲ್ಲಿ 21 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ದುಬಾರೆ, ಮತ್ತಿಗೋಡು, ಆನೆ ಚೌಕಿಯಿಂದ 8 ಸಾಕಾನೆಗಳನ್ನು ಬಳಸಿ ಹಾಸನ ಜಿಲ್ಲೆಯ ಬೇಲೂರು, ಆಲೂರು ಸಕಲೇಶಪುರ ಭಾಗದಲ್ಲಿ ಬೀಡು ಬಿಟ್ಟಿರೊ ಕಾಡಾನೆ ಹಿಂಡಿನ ಚಲನವಲನ ವೀಕ್ಷಣೆಗಾಗಿ ರೇಡಿಯೋ ಕಾಲರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮಳೆಕಾರಣ ಹಾಗು ಸಾಕಾನೆಗಳು ದಸರಾಕ್ಕೆ ಹೋಗಿದ್ದ ಕಾರಣ ಕಾರ್ಯಾಚರಣೆ ತಡವಾಗಿತ್ತು. ಇಂದಿನಿಂದ ಗುಂಪಿನಲ್ಲಿರೊ ಹೆಣ್ಣಾನೆ ಹಾಗು ಒಂಟಿಯಾಗಿ ಓಡಾಡೊ ಸಲಗಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗುತ್ತಿದೆ.ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಗಜಪಡೆ ಉಪಟಳ ತಡೆಗೆ ಜನರು ಆಗ್ರಹಿಸಿದ್ರು, ಕಳೆದ ಒಂದು ತಿಂಗಳಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಅರೆಹಳ್ಕಿ ಭಾಗದಲ್ಲಿ ಆನೆಗಳ ದಾಂದಲೆ ಹೆಚ್ಚಿತ್ತು.ಕಾಡಾನೆಗಳು ಕಾಫಿ, ಬಾಳೆ, ಅಡಿಕೆ ಬೆಳೆನಾಶ ಮಾಡುತ್ತಿವೆ. ಗುಂಪು ಗುಂಪಾಗಿ ಓಡಾಡುತ್ತಾ, ಗ್ರಾಮಗಳ ಸನಿಹವೇ ಬಂದು ಜೀವ ಭಯ ಸೃಷ್ಟಿ ಮಾಡುತ್ತಿವೆ. ಆನೆಗಳ ಸಂಚಾರದಿಂದ ಜನರು ತಮ್ಮಕಾಫಿ ತೋಟಕ್ಕೆ ತೆರಳಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಡಾನೆಗಳ ಸಂಪೂರ್ಣ ಸ್ಥಳಾಂತರಕ್ಕೆ ಜನರು ಆಗ್ರಹಿಸಿದ್ದಾರೆ. ತಾತ್ಕಾಲಿಕ ಕ್ರಮವಾಗಿ ರೇಡಿಯೋ ಕಾಲರಿಂಗ್ ಹಾಗೂ ಕೆಲ ಪುಂಡಾನೆ ಸೆರೆ ಹಿಡಿದು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಡಿಸಿಎಫ್ ಮೋಹನ್ ಕುಮಾರ್, ಹಾಸನ ಎಸಿಎಫ್ ಪ್ರಭು ಆಯ್ ಹಾಗು ಸಕಲೇಶಪುರ ಎಸಿಎಫ್ ಮಹದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಅಭಿಮನ್ಯು, ಭೀಮ, ಅರ್ಜುನ, ಪ್ರಶಾಂತ, ಸೇರಿ ಎಂಟು ಸಾಕಾನೆಗಳು ಭಾಗಿಯಾಗಿವೆ. ಒಟ್ಟು 21 ದಿನ ಕಾರ್ಯಾಚರಣೆಗೆ ಸಿದ್ದತೆ ನಡೆದಿದ್ದು 9 ಆನೆಗಳಿಗೆ ರೇಡಿಯೋ ಕಾಲರ್ ಹಾಗು ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿರೊ ಐದು ಗಂಡಾನೆಗಳ ಸೆರೆ ಹಿಡಿದು ಸ್ಥಳಾಂತರಕ್ಕೂ ಕ್ರಮ ಕೈಗೊಳ್ಳಲಾಗುತ್ತೆ.