ನಂಜನಗೂಡು: ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಸಿಇಟಿ ಪರೀಕ್ಷಾ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದನ್ನು ಖಂಡಿಸಿ ನಂಜನಗೂಡು ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರಕೂಟದವರು ನಗರದ ಕಪಿಲಾ ಸ್ನಾನ ಘಟ್ಟಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸಂಜೆ ಕಪಿಲಾ ಸ್ನಾನ ಘಟ್ಟಕ್ಕೆ ಆಗಮಿಸಿದ ನೂರಾರು ವಿಪ್ರರು, ಅಲ್ಲಿ ಜನಿವಾರ ಹಿಡಿದು ಗಾಯತ್ರಿ ಮಂತ್ರ ಪಠಿಸಿ ವಿನೂತನ ಪ್ರತಿಭಟನೆಗೆ ನಾಂದಿ ಹಾಡಿದರು.
ನಂತರ ಊಟಿ ರಸ್ತೆಯ ಚಿಂತಾಮಣಿ ಗಣಪತಿ ದೇವಾಲಯಕ್ಕೆ ಆಗಮಿಸಿ ಪಂಜಿನ ಮೆರವಣಿಗೆ ನಡೆಸಿ, ಜನಿವಾರ ತೆಗೆಸಿದವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:- ಬ್ರಾಹ್ಮಣರ ಬುದ್ದಿ ಜನಿವಾರದಲ್ಲಲ್ಲ…ಅವರ ತಲೆಯಲ್ಲಿದೆ ; ಪ್ರತಾಪ್ ಸಿಂಹ
ಈ ಘಟನೆ ಇಡೀ ಬ್ರಾಹ್ಮಣ ಸಮೂಹಕ್ಕೆ ಮಾಡಿದ ಅವಮಾನವಾಗಿದೆ. ವಿಪ್ರರಿಗೆ ತಾಯಿ ಗಾಯತ್ರಿ ದೇವಿಯಷ್ಟೇ ಜನಿವಾರವೂ ಮುಖ್ಯ. ಜನಿವಾರವಿಲ್ಲದೆ ಬ್ರಾಹ್ಮಣ್ಯವೇ ಇಲ್ಲ. ಇಂಥ ಪವಿತ್ರವಾದ ಜನಿವಾರ ತೆಗೆಸಿದವರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಶ್ರೀಕಂಠೇಶ್ವರ ದೇವಾಲಯದವರೆಗೂ ಪಂಜಿನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಗೋವರ್ಧನ್ ಹಾಗೂ ಮುಖಂಡರಾದ ಯು.ಎನ್.ಪದ್ಮನಾಭರಾವ್, ಶ್ರೀಕಂಠೇಶ್ವರ ದೇವಾಲಯದ ಆಗಮಿಕ ನೀಲಕಂಠ ದೀಕ್ಷಿತ್, ವಳಗುಡಿ ಶಿವಣ್ಣ, ಕೃಷ್ಣ ಜೋಯ್ಸ್, ನಗರಸಭಾ ಸದಸ್ಯ ಕಪಿಲೇಶ, ಇ.ಕೆ.ರಾಮ್ ಮೋಹನ , ರಮೇಶ, ಉಮೇಶ, ಸತೀಶ ದಳವಾಯಿ, ಸವಿತಾ ನಾಗೇಂದ್ರ, ರಮ್ಯಾ ರಾಘವೇಂದ್ರ, ಸುಧಾಮಣಿ, ನೂರಾರು ವಿಪ್ರರು ಭಾಗಿಯಾಗಿದ್ದರು.





